ಬೆಂಗಳೂರು: ನವೋದ್ಯಮದ ಆಲೋಚನೆ ಇರುವವರು, ಅದಕ್ಕಾಗಿ ಧನಸಹಾಯ ನಿರೀಕ್ಷೆ ಮಾಡುತ್ತಿರುವವರಿಗೆ ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯ ನೀಡಲು ರಾಮಯ್ಯ ಸಮೂಹ ಸಂಸ್ಥೆ ‘ರಾಮಯ್ಯ ವಿಕಸನ’ ಎಂಬ ಹೊಸ ಕೇಂದ್ರ ಸ್ಥಾಪಿಸಿದೆ.
ಈ ಕೇಂದ್ರದಲ್ಲಿ ನವೋದ್ಯಮ ಆರಂಭಿಸಿ ಯಶಸ್ವಿಯಾಗಿದವರು ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ವಿಕಸನ ಕೇಂದ್ರಕ್ಕೆ ಗೋಕುಲ ಎಜುಕೇಷನ್ ಫೌಂಡೇಷನ್‌ನ ಅಧ್ಯಕ್ಷ ಡಾ.ಎಂ.ಆರ್.ಜಯರಾಂ, ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಬುಧವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಯರಾಂ, ‘ಇದು ನವೋದ್ಯಮಿಗಳಿಗೆ ಉತ್ತಮವಾದ ವೇದಿಕೆಯಾಗಿದೆ. ಅವರಲ್ಲಿನ ಆಲೋಚನೆಗಳಿಗೆ ಮೂರ್ತ ರೂಪ ನೀಡುವ ಕೆಲಸವನ್ನು ಈ ವಿಕಸನ ಮಾಡಲಿದೆ. ಈ ಕೇಂದ್ರದಲ್ಲಿರುವ ಮಾರ್ಗದರ್ಶಕರು ಈ ಹಿಂದೆ ಹಲವು ನವೋದ್ಯಮಗಳನ್ನು ಆರಂಭಿಸಿ ಯಶಸ್ವಿಯಾಗಿ ನಡೆಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.
‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಮಾತ್ರವಲ್ಲದೆ, ಹೊರಗಿನವರು ಕೂಡ ಭಾಗವಹಿಸಬಹುದು. ಅವರಿಗೆ ಮಾರ್ಗದರ್ಶನದ ಜತೆಗೆ ₹50 ಲಕ್ಷ ತನಕ ಸಹಾಯ ಮಾಡಲಾಗುವುದು’ ಎಂದರು.
‘ನಮ್ಮ ದೇಶದ ಜಿಡಿಪಿ ಬೆಳವಣಿಗೆ ಸಾಧಿಸಬೇಕಾದರೆ ತಂತ್ರಜ್ಞಾನದಲ್ಲಿ ಹೆಚ್ಚು ಪರಿಣಿತಿ ಪಡೆಯಬೇಕು. ನವೋದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.