ADVERTISEMENT

MSW ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಲು ಯತ್ನ: ಗುತ್ತಿಗೆ ಉದ್ಯೋಗಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 13 ಮೇ 2022, 4:43 IST
Last Updated 13 ಮೇ 2022, 4:43 IST
   

ಬೆಂಗಳೂರು: ನಕಲಿ ಅಂಕಪಟ್ಟಿ ಕೊಟ್ಟು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದ ಜಿ. ನಾಗರತ್ನಾ ಭಟ್ (49) ಎಂಬಾಕೆಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿ ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ನಕಲಿ ಅಂಕಪಟ್ಟಿ ಕೊಟ್ಟು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದ

2016ರ ಜುಲೈ 24ರಂದು ಹಲಸೂರು ಗೇಟ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಆನಂದ್ ಟಿ. ಚವ್ಹಾಣ್ ನಡೆಸಿದ್ದರು. ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಎ.ವಿ. ಮಧು ವಾದಿಸಿದ್ದರು.

ADVERTISEMENT

‘ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೆಹೊಳೆಯ ನಾಗರತ್ನಾ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸ್ವಚ್ಛ ಭಾರತ್ ಅಭಿಯಾನದಡಿ ಗುತ್ತಿಗೆ ಆಧಾರದಲ್ಲಿ 2011ರಲ್ಲಿ ಕೆಲಸಕ್ಕೆ ನೇಮಕಗೊಂಡಿದ್ದಳು. ಕಾವೇರಿ ಭವನದಲ್ಲಿರುವ ಮಾಹಿತಿ ಶಿಕ್ಷಣ ಮತ್ತು ಸಂಪರ್ಕ (ಐಇಸಿ) ವಿಭಾಗದಲ್ಲಿ ಸಲಹೆಗಾರ್ತಿಯಾಗಿ ಕೆಲಸ ಆರಂಭಿಸಿದ್ದಳು’ ಎಂಬ ಮಾಹಿತಿ ಆದೇಶದಲ್ಲಿದೆ.

‘2016ರಲ್ಲಿ ಕೆಲಸ ಕಾಯಂಗೊಳಿಸಲು ಮುಂದಾಗಿದ್ದ ಇಲಾಖೆ, ಹುದ್ದೆಗೆ ಅಗತ್ಯವಾಗಿದ್ದ ಎಂಎಸ್‌ಡಬ್ಲ್ಯು ಅಂಕಪಟ್ಟಿ ಸಲ್ಲಿಸುವಂತೆ ತಿಳಿಸಿತ್ತು. ಆಗ ನಾಗರತ್ನಾ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಹೆಸರಿನಲ್ಲಿದ್ದ ಅಂಕಪಟ್ಟಿ ಕೊಟ್ಟಿದ್ದಳು. ನೇಮಕಾತಿ ಅಧಿಕಾರಿಗಳು,ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿತ್ತು. ಆಗ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420), ಸಹಿ ನಕಲು (ಐಪಿಸಿ 465), ನಕಲಿ ದಾಖಲೆ ಸೃಷ್ಟಿ (ಐಪಿಸಿ 468) ಹಾಗೂ ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸಿದ (ಐಪಿಸಿ 471) ಆರೋಪದಡಿ ನಾಗರತ್ನಾ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು’ ಎಂಬ ಅಂಶವೂ ಆದೇಶದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.