ADVERTISEMENT

ಮುಡಾ ಪ್ರಕರಣ: ಲೋಕಾಯುಕ್ತ ಪೊಲೀಸರಿಂದ ಬಿ.ಎನ್‌. ಬಚ್ಚೇಗೌಡ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:47 IST
Last Updated 24 ಅಕ್ಟೋಬರ್ 2024, 15:47 IST
<div class="paragraphs"><p>ಬಿ.ಎನ್. ಬಚ್ಚೇಗೌಡ</p></div>

ಬಿ.ಎನ್. ಬಚ್ಚೇಗೌಡ

   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಮಾಜಿ ಸಚಿವ ಬಿ.ಎನ್‌. ಬಚ್ಚೇಗೌಡ ಅವರ ಮನೆಗೆ ಗುರುವಾರ ಭೇಟಿನೀಡಿ ಹೇಳಿಕೆ ದಾಖಲಿಸಿಕೊಂಡರು.

ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದ ಬಚ್ಚೇಗೌಡ ಅವರು ಮೈಸೂರಿನ ಕೆಸರೆ ಗ್ರಾಮದಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿದ್ದ 3 ಎಕರೆ 16 ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವುದಕ್ಕೆ ಸಂಬಂಧಿಸಿದ ಕಡತವನ್ನು ಅನುಮೋದಿಸಿದ್ದರು. ಈ ಕಾರಣಕ್ಕಾಗಿ ಅವರ ವಿಚಾರಣೆ ನಡೆಸಲಾಗಿದೆ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ADVERTISEMENT

ಬಚ್ಚೇಗೌಡ ಅವರಿಗೆ ವಯಸ್ಸಾಗಿರುವ ಕಾರಣದಿಂದ ಅವರಿಗೆ ತನಿಖಾ ತಂಡ ನೋಟಿಸ್‌ ಜಾರಿಗೊಳಿಸಿರಲಿಲ್ಲ. ಲೋಕಾಯುಕ್ತದ ಮೈಸೂರು ಎಸ್‌ಪಿ ಉದೇಶ್‌ ಟಿ.ಜೆ. ನೇತೃತ್ವದ ತಂಡವು ಲಾಲ್‌ಬಾಗ್‌ ಸಮೀಪದಲ್ಲಿರುವ ಮಾಜಿ ಸಚಿವರ ಮನೆಗೆ ಭೇಟಿ ನೀಡಿ, ಹೇಳಿಕೆ ದಾಖಲಿಸಿಕೊಂಡಿತು.

‘ಕೆಸರೆ ಗ್ರಾಮದ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ ಯಾರಾದರೂ ಒತ್ತಡ ಹೇರಿದ್ದರೆ? ಈಗ ಪ್ರಕರಣದ ತನಿಖೆಯ ಸಂಬಂಧ ಯಾರಾದರೂ ನಿಮ್ಮನ್ನು ಸಂಪರ್ಕಿಸಿ ಒತ್ತಡ ಹೇರಿದ್ದಾರೆಯೆ?’ ಎಂಬ ಪ್ರಶ್ನೆಗಳನ್ನು ತನಿಖಾ ತಂಡವು ಬಚ್ಚೇಗೌಡರಿಗೆ ಕೇಳಿ, ಉತ್ತರ ಪಡೆದಿದೆ ಎಂದು ಮೂಲಗಳು ಹೇಳಿವೆ.

‘ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ಟಪಾಲಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ವಸತಿ ಮತ್ತು ನಗರಾಭಿವೃದ್ಧಿ ಸಚಿವನಾಗಿದ್ದ ಕಾರಣದಿಂದ ಸಹಜವಾಗಿಯೇ ನನ್ನ ಬಳಿ ಆ ಕಡತ ಬಂದಿತ್ತು. ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಆಗ ಯಾರೂ ನನ್ನ ಮೇಲೆ ಪ್ರಭಾವ ಬೀರಿರಲಿಲ್ಲ. ಈಗಲೂ ಯಾರೂ ಒತ್ತಡ ಹೇರಿಲ್ಲ’ ಎಂಬ ಉತ್ತರವನ್ನು ಅವರು ನೀಡಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.