Muda Scam | ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಒಪ್ಪಿಗೆ: ಮುಂದೇನು
ಪ್ರಜಾವಾಣಿ ವಾರ್ತೆ Published 18 ಆಗಸ್ಟ್ 2024, 0:35 IST Last Updated 18 ಆಗಸ್ಟ್ 2024, 0:35 IST ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ರಾಜ್ಯಪಾಲರ ತೀರ್ಮಾನ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತು ರಾಜಭವನದ ಮಧ್ಯೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಶನಿವಾರ ಸಂಜೆ ಹೊತ್ತಿಗೆ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯಪಾಲರ ನಿರ್ಣಯಕ್ಕೆ ಧಿಕ್ಕಾರ ಹೇಳುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ಕೊಡಕೂಡದು, ನಿಮ್ಮ ಜತೆ ಒಗ್ಗಟ್ಟಿನಿಂದ ನಾವು ನಿಲ್ಲಲಿದ್ದೇವೆ ಎಂಬ ನಿರ್ಣಯವನ್ನೂ ಸಚಿವ ಸಂಪುಟದ ಸಹೋದ್ಯೋಗಿಗಳು ಕೈಗೊಂಡರು.
ಬಳಿಕ ವಿಧಾನಸೌಧದಲ್ಲಿ ಒಟ್ಟಾಗಿಯೇ ಪತ್ರಿಕಾಗೋಷ್ಠಿ ನಡೆಸಿದ ಸಚಿವರು, ಈ ಕುರಿತ ನಿರ್ಣಯವನ್ನು ಪ್ರಕಟಿಸಿದರು. ತನಿಖೆಗೆ ಅನುಮತಿ ನೀಡಿರುವುದರ ವಿರುದ್ಧ ಕಾನೂನು ಹೋರಾಟಕ್ಕೂ ಸರ್ಕಾರ ತಯಾರಿ ನಡೆಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಜ್ಯದಾದ್ಯಂತ ಪ್ರತಿಭಟನೆ ಆರಂಭಿಸಿದ್ದಾರೆ. ಸಂಪುಟದ ಎಲ್ಲ ಸದಸ್ಯರು ಮತ್ತು ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯವರ ಬೆನ್ನಿಗೆ ನಿಂತಿದ್ದಾರೆ. ಇನ್ನೊಂದೆಡೆ ಬಿಜೆಪಿ ಹಾಗೂ ಜೆಡಿಎಸ್ ಮುಖ್ಯಮಂತ್ರಿಯವರ ರಾಜೀನಾಮೆಗೆ ಆಗ್ರಹಿಸಿವೆ.
ರಾಜ್ಯಪಾಲರ ಸಮ್ಮತಿ:
ವಕೀಲರಾದ ಟಿ.ಜೆ. ಅಬ್ರಹಾಂ, ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಮೈಸೂರಿನ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮನವಿಗಳನ್ನು ಪುರಸ್ಕರಿಸಿರುವ ರಾಜ್ಯಪಾಲರು, ಮೂರೂ ದೂರುಗಳಲ್ಲಿರುವ ಆರೋಪಗಳ ಕುರಿತು ತನಿಖೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17–ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರಡಿ ಒಪ್ಪಿಗೆ ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ಕೋರಿ ಅಬ್ರಹಾಂ ಜುಲೈ 26ರಂದು ಮನವಿ ಸಲ್ಲಿಸಿದ್ದರು. ಅದೇ ದಿನ ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದ ರಾಜ್ಯಪಾಲರು, ವಿವರಣೆ ಕೇಳಿದ್ದರು. ಮನವಿಯನ್ನು ತಿರಸ್ಕರಿಸುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಣಯವನ್ನು ಆಗಸ್ಟ್ 1ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿಯವರು ಆ.3ರಂದು ರಾಜ್ಯಪಾಲರಿಗೆ ಉತ್ತರ ಸಲ್ಲಿಸಿದ್ದರು.
ಎರಡು ವಾರ ಮೌನವಾಗಿದ್ದ ರಾಜ್ಯಪಾಲರು, ತನಿಖೆಗೆ ಅನುಮತಿ ನೀಡುವ ನಿರ್ಧಾರವನ್ನು ಶುಕ್ರವಾರ ತಡರಾತ್ರಿ ಕೈಗೊಂಡಿದ್ದಾರೆ. ಮೂರೂ ಅರ್ಜಿದಾರರಿಗೆ ಶನಿವಾರ ಆದೇಶದ ಪ್ರತಿಯನ್ನು ಹಸ್ತಾಂತರಿಸಲಾಯಿತು.
ಶೋಕಾಸ್ ನೋಟಿಸ್ ನೀಡಿದ್ದ ರಾಜ್ಯಪಾಲರ ಕ್ರಮಕ್ಕೇ ಆಕ್ಷೇಪಿಸಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಈಗ ತನಿಖೆಗೆ ಅನುಮತಿ ನೀಡಿರುವುದನ್ನೂ ವಿರೋಧಿಸಿದೆ.
ಎಚ್‌ಡಿಕೆ, ನಿರಾಣಿ ವಿರುದ್ಧ ಅನುಮತಿ ಏಕಿಲ್ಲ: ಸಿ.ಎಂ
‘ಗಣಿ ಭೂಮಿ ಮಂಜೂರು ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ತಪ್ಪಿತಸ್ಥ ಎಂದು ಉಲ್ಲೇಖಿಸಿ, ಪ್ರಾಸಿಕ್ಯೂಷನ್ ಅನುಮತಿಗೆ ಲೋಕಾಯುಕ್ತ ಮನವಿ ಸಲ್ಲಿಸಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಆದರೆ, ಮುಡಾ ಪ್ರಕರಣದಲ್ಲಿ ನನ್ನ ಪಾತ್ರದ ಬಗ್ಗೆ ಯಾರೂ ಯಾವುದೇ ದಾಖಲೆ ಕೊಡದಿದ್ದರೂ, ತನಿಖೆಯೇ ನಡೆದಿಲ್ಲವಾದರೂ ಅನುಮತಿ ನೀಡಿರುವುದರ ಉದ್ದೇಶವೇನು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಶನಿವಾರ ನಡೆದ ತುರ್ತು ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಡಾ ಪ್ರಕರಣ ನನ್ನ ಸರ್ಕಾರದ ಅವಧಿಯಲ್ಲಿ ನಡೆದಿಲ್ಲ. ನನ್ನಿಂದ ಒಂದೂ ಪತ್ರ ಹೋಗಿಲ್ಲ. ನನ್ನ ಸಹಿ ಎಲ್ಲೂ ಇಲ್ಲ. ಎಲ್ಲವೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ. ನನ್ನ ವಿಚಾರದಲ್ಲಿ ಸ್ವಂತ ಬುದ್ಧಿಯಿಂದ ರಾಜ್ಯಪಾಲರು ನಡೆದುಕೊಂಡಿಲ್ಲ’ ಎಂದರು. ‘ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ವಿರುದ್ಧವೂ ತನಿಖೆ ನಡೆಸಿದ್ದ ಲೋಕಾಯುಕ್ತ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿ ಈ ಹಿಂದೆಯೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಆದರೆ, ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಆದರೆ, ನನ್ನ ವಿಚಾರದಲ್ಲಿ ತರಾತುರಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಟೀಕಿಸಿದರು. ‘ರಾಜ್ಯಪಾಲರ ತೀರ್ಮಾನ ಕಾನೂನುಬಾಹಿರ, ಅಸಂವಿಧಾನಿಕವೆಂದು ಅಭಿಪ್ರಾಯಪಟ್ಟು, ಇಡೀ ಸಚಿವ ಸಂಪುಟ ತೀವ್ರವಾಗಿ ಖಂಡಿಸಿದೆ. ಪ್ರಾಸಿಕ್ಯೂಷನ್ ಅನುಮತಿಗೆ ಸಂವಿಧಾನದ ಬಲವಿಲ್ಲ ಎಂದೂ ನಿರ್ಣಯಿಸಿದೆ. ರಾಜ್ಯಪಾಲರು ಸಂವಿಧಾನದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಬಿಜೆಪಿ– ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಜನಾಶೀರ್ವಾದದಿಂದ ರಚನೆಯಾಗಿರುವ ಸರ್ಕಾರವನ್ನು ರಾಜ್ಯಪಾಲರ ಮೂಲಕ ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವಕ್ಕೆ, ಒಕ್ಕೂಟ ವ್ಯವಸ್ಥೆಗೆ, ಪ್ರಜಾತಂತ್ರಕ್ಕೆ ಧಕ್ಕೆ ಎಂದು ಸಚಿವ ಸಂಪುಟ ನಿರ್ಣಯಿಸಿದೆ’ ಎಂದರು. ‘ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸಂಪೂರ್ಣ ರಾಜಕೀಯ ದುರುದ್ದೇಶದ ತೀರ್ಮಾನ. ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ರಾಜಭವನದ ಈ ನಡೆಗೆ ಧಿಕ್ಕಾರ ಹೇಳುತ್ತೇವೆ. ದೊಡ್ಡ ಷಡ್ಯಂತ್ರ ನಡೆಯುತ್ತಿರುವುದು ನಮಗೆ ಗೊತ್ತಿತ್ತು. ಅದಕ್ಕೆ ನಾವೂ ಹೋರಾಟದ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು. ‘ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ಜನರು ನನ್ನ ಜೊತೆ ಇರುವವರೆಗೂ ಇದು ಸಾಧ್ಯವಿಲ್ಲ. ಏಳು ಕೋಟಿ ಕನ್ನಡಿಗರ ಆಶೀರ್ವಾದದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ’ ಎಂದರು. ‘ಇಡೀ ಸಚಿವ ಸಂಪುಟ ನನ್ನ ಜೊತೆ ಇರುವುದಾಗಿ ಹೇಳಿದೆ. ಪಕ್ಷ ಕೂಡ ಇದನ್ನೇ ಹೇಳಿದೆ. ಸಚಿವರು, ಶಾಸಕರು, ಕಾರ್ಯಕರ್ತರು ನನಗೆ ಬೆಂಬಲ ನೀಡಿದ್ದಾರೆ. ನನ್ನ ಜೊತೆ ಇರುತ್ತೇವೆಂದು ಹೈಕಮಾಂಡ್ ನಾಯಕರೂ ದೂರವಾಣಿ ಕರೆ ಮಾಡಿ ಹೇಳಿದ್ದಾರೆ’ ಎಂದರು. ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಆಗ್ರಹಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ, ‘ನಾನು ಯಾಕೆ ರಾಜೀನಾಮೆ ನೀಡಬೇಕು? ಏನು ಅಪರಾಧ ಮಾಡಿದ್ದೇನೆ? ನನ್ನ ವಿರುದ್ಧ ಕಾನೂನುಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ತೀರ್ಮಾನ ತೆಗೆದುಕೊಂಡ ರಾಜ್ಯಪಾಲರೇ ರಾಜೀನಾಮೆ ನೀಡಬೇಕು’ ಎಂದು ಏರುಧ್ವನಿಯಲ್ಲಿ ಪ್ರತಿಕ್ರಿಯಿಸಿದರು.
ತನಿಖೆ ಏಕೆ?
ರಾಜ್ಯಪಾಲರ ಸಮರ್ಥನೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುವ ಅವಶ್ಯ ಏಕೆ ಎಂಬ ಬಗ್ಗೆ ರಾಜ್ಯಪಾಲರು ನೀಡಿದ ಸಮರ್ಥನೆ ಹೀಗಿದೆ... 1 ಮುಡಾದಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆಗೆ ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ ಸಮಿತಿ ನೇಮಿಸುವ ತೀರ್ಮಾನವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಹಗರಣದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಏಕಸದಸ್ಯ ವಿಚಾರಣಾ ಆಯೋಗ ನೇಮಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಬದಲಿ ನಿವೇಶನಗಳ ಹಂಚಿಕೆ ಜಮೀನು ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಏಕಸದಸ್ಯ ಆಯೋಗದ ಕಾರ್ಯವ್ಯಾಪ್ತಿ ನಿಗದಿಪಡಿಸಿರುವ ಆದೇಶವೇ ದೃಢಪಡಿಸುತ್ತದೆ. ಐಎಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿ ದಿಢೀರನೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸುವ ಮೂಲಕ ಸರ್ಕಾರವು ಮುಡಾದಲ್ಲಿ ಪ್ರಭಾವಿ ವ್ಯಕ್ತಿಗಳಿಂದ ಹಗರಣ ನಡೆದಿರುವುದನ್ನು ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ಸಂಪುಟದ ನಿರ್ಧಾರವು ವಿಶ್ವಾಸ ಮೂಡಿಸುವಂತಿಲ್ಲ. 2 ಯಾರ ವಿರುದ್ಧ ಆರೋಪಗಳು ಕೇಳಿಬಂದಿವೆಯೋ ಅದೇ ವ್ಯಕ್ತಿ ತನಿಖೆಯ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಚಲಾಯಿಸಬಾರದು ಎಂಬುದು ಕಾನೂನಿನ ಅಡಿಯಲ್ಲಿ ಸ್ಪಷ್ಟವಾಗಿ ತೀರ್ಮಾನವಾಗಿದೆ. ಈ ಪ್ರಕರಣದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದ್ದು ದೂರಿನಲ್ಲಿರುವ ದಾಖಲೆಗಳು ಆರೋಪವನ್ನು ಮೇಲ್ನೋಟಕ್ಕೆ ದೃಢಪಡಿಸುವಂತಿದ್ದರೂ ತನಿಖೆಗೆ ಅನುಮತಿ ಕೋರಿರುವ ಅರ್ಜಿ ತಿರಸ್ಕರಿಸುವಂತೆ ಸಲಹೆ ನೀಡಲು ಸಂಪುಟ ಸಭೆಯು ಕೈಗೊಂಡಿರುವ ನಿರ್ಣಯವು ವಿವೇಕರಹಿತವಾದುದು. 3 ಸಿದ್ದರಾಮಯ್ಯ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ದೂರುಗಳು ಜತೆಗಿರುವ ದಾಖಲೆಗಳು ಸಂಪುಟದ ಸಲಹೆ ಮತ್ತು ಕಾನೂನು ತಜ್ಞರ ಅಭಿಪ್ರಾಯಗಳನ್ನು ಪರಿಶೀಲಿಸಲಾಗಿದೆ. ಈ ವಿಷಯದಲ್ಲಿ ಎರಡು ಬಗೆಯ ಅಭಿಪ್ರಾಯಗಳಿವೆ. ಆರೋಪಗಳು ಮತ್ತು ಅವುಗಳ ಜತೆಗಿರುವ ದಾಖಲೆಗಳು ಅಪರಾಧ ನಡೆದಿರುವುದನ್ನು ದೃಢಪಡಿಸುವಂತಿವೆ ಎಂಬುದು ನನಗೆ ಮನವರಿಕೆಯಾಗಿದೆ. ಈ ಕುರಿತು ತಟಸ್ಥ ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವುದು ಅತ್ಯಂತ ಅಗತ್ಯವಾಗಿದೆ.
ಪ್ರಕರಣದಲ್ಲಿ ಮಂದಿನ ಸಾಧ್ಯತೆಗಳು
* ಟಿ.ಜೆ. ಅಬ್ರಹಾಂ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಎಸ್.ಪಿ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಸಿರುವ ಖಾಸಗಿ ದೂರುಗಳು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ನ್ಯಾ. ಸಂತೋಷ ಗಜಾನನ ಭಟ್ ಅವರು ಇದೇ 21ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ. * ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ವಿಚಾರಣೆ ಆರಂಭಿಸಲು ಅನುಮತಿ ನೀಡಿಲ್ಲ. ತನಿಖೆಗೆ ಮಾತ್ರ ಅನುಮತಿ ನೀಡಿದ್ದಾರೆ. ದೂರುದಾರರು ರಾಜ್ಯಪಾಲರ ಅನುಮತಿ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದು. ಅದನ್ನು ಆಧರಿಸಿ ಆರೋಪಗಳ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಬಹುದು. * ದೂರುದಾರರು ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಮತ್ತು ರಾಜ್ಯಪಾಲರ ಅನುಮತಿಯನ್ನು ಸಲ್ಲಿಸಿ ತನಿಖೆ ಆರಂಭಿಸುವಂತೆಯೂ ಮನವಿ ಮಾಡಬಹುದು. * ನ್ಯಾಯಾಲಯ ನಿರ್ದೇಶನ ನೀಡಿದರೆ ಅಥವಾ ದೂರುದಾರರು ನೇರವಾಗಿ ದೂರು ಸಲ್ಲಿಸಿದರೆ ಲೋಕಾಯುಕ್ತ ಪೊಲೀಸರು ಆರೋಪಿಗಳ ಪಟ್ಟಿಯಲ್ಲಿ ಉಲ್ಲೇಖಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಬಹುದು. * ದೂರಿನ ಜತೆ ಲಭ್ಯವಿರುವ ದಾಖಲೆಗಳ ಆಧಾರದಲ್ಲೇ ಮುಖ್ಯಮಂತ್ರಿಯವರ ವಿರುದ್ಧ ವಿಚಾರಣೆ ಆರಂಭಿಸಬಹುದು ತನಿಖೆಯ ಅಗತ್ಯವಿಲ್ಲ ಎಂದು ದೂರುದಾರರು ಮನವಿ ಸಲ್ಲಿಸಿದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ರಾಜ್ಯಪಾಲರಿಂದ ವಿಚಾರಣೆಗೆ ಪ್ರತ್ಯೇಕ ಅನುಮತಿ ಪಡೆದು ಸಲ್ಲಿಸುವಂತೆ ದೂರುದಾರರಿಗೆ ನ್ಯಾಯಾಲಯವು ನಿರ್ದೇಶನ ನೀಡುತ್ತದೆ. ಅನುಮತಿ ಪಡೆದು ಸಲ್ಲಿಸುವವರೆಗೂ ಖಾಸಗಿ ದೂರನ್ನು ಬಾಕಿ ಇರಿಸಬಹುದು.
ಅನುಮತಿ ಏಕೆ ಅಗತ್ಯ?
* ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಸರ್ಕಾರಿ ನೌಕರ ಅಥವಾ ಚುನಾಯಿತ ಪ್ರತಿನಿಧಿ ವಿರುದ್ಧ ತನಿಖೆ ಆರಂಭಿಸುವುದಕ್ಕೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ 2018ರಲ್ಲಿ ತಿದ್ದುಪಡಿ ತರಲಾಗಿದೆ. ಸೆಕ್ಷನ್ 17–ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೆ ತನಿಖೆ ನಡೆಸುವಂತಿಲ್ಲ. * ಸರ್ಕಾರಿ ನೌಕರರು ಅಥವಾ ಚುನಾಯಿತ ಪ್ರತಿನಿಧಿಗಳ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್‌ಗಳ ಅಡಿಯಲ್ಲಿನ ಆರೋಪಗಳ ಕುರಿತು ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯ ಎಂದು ಬಿಎನ್‌ಎಸ್‌ಎಸ್ ಸೆಕ್ಷನ್ 218 ಹೇಳುತ್ತದೆ.