ADVERTISEMENT

ರಾಮಾನುಜರು ಜಾತಿ ವ್ಯವಸ್ಥೆಗೆ ವಿರೋಧಿಯಾಗಿದ್ದರು: ಮೂಡ್ನಾಕೂಡು ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:13 IST
Last Updated 23 ಜೂನ್ 2024, 16:13 IST
ಮೂಡ್ನಾಕೂಡು ಚಿನ್ನಸ್ವಾಮಿ
ಮೂಡ್ನಾಕೂಡು ಚಿನ್ನಸ್ವಾಮಿ   

ಬೆಂಗಳೂರು: ‘ವೈದಿಕರ ನಡುವಿನಿಂದಲೇ ಸಿಡಿದೆದ್ದ ರಾಮಾನುಜರು ಜಾತಿ ವ್ಯವಸ್ಥೆ ವಿರೋಧಿಯಾಗಿದ್ದರು. ಮನುಷ್ಯರೆಲ್ಲರೂ ಒಂದೇ ಎಂಬ ನಿಲುವು ತಾಳಿದ್ದರು’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಸತ್ತಿಗೆ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಯಣ್ಣಸ್ವಾಮಿ ಕಿರಂಗೂರು ಅವರ ‘ಕೊಪ್ಪದ ಕಾಂತಿ’, ‘ಕಾಂಬೊಲ’, ‘ತಲಪರಿಗೆಯ ತಾರಕ ಕೆ.ಟಿ. ರಾಮಸ್ವಾಮಿ’ ಹಾಗೂ ‘ರೋಚನಿ’ ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು. 

‘12ನೇ ಶತಮಾನದಲ್ಲಿ ಶರಣ ಚಳವಳಿಯ ಮೂಲಕ ಸಾಮಾಜಿಕ ಕ್ರಾಂತಿ ನಡೆಯಿತು. ಆದರೆ, ಅದಕ್ಕೂ ಮೊದಲು ದಕ್ಷಿಣ ಕರ್ನಾಟಕದಲ್ಲಿ ರಾಮಾನುಜಾಚಾರ್ಯರಿಂದ ಸಾಮಾಜಿಕ ಕ್ರಾಂತಿ ನಡೆಯಿತು. 11ನೇ ಶತಮಾನದಲ್ಲಿ ನಡೆದ ಅವರ ಚಳವಳಿ ಇತಿಹಾಸದ ಪುಟಗಳಲ್ಲಿ ಒಂದು ದಾಖಲೆಯಾಗಿದೆ. ಅವರು ಹೊಲೆಮಾದಿಗರಿಗೂ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ದಲಿತರಿಗೆ ದೀಕ್ಷೆ ನೀಡಿ, ಬ್ರಾಹ್ಮಣ ಜಾತಿಯೊಳಗೆ ಬರಮಾಡಿಕೊಂಡರು. ಮಾಂಸಹಾರವನ್ನು ತ್ಯಜಿಸಲು ಇಚ್ಚಿಸದವರು ದಲಿತರಲ್ಲಿ ದಾಸರಾಗಿಯೇ ಉಳಿದರು. ಈಗಲೂ ಅವರು ಹಳ್ಳಿಗಳಲ್ಲಿ ಸಿಗುತ್ತಾರೆ. ಯಾವುದು ಗೌಪ್ಯವಾಗಿತ್ತೋ ಅಂತಹ ಮಂತ್ರವನ್ನು ಬಹಿರಂಗವಾಗಿ ಎಲ್ಲರಿಗೂ ಬೋಧಿಸಿದರು. ಅದೊಂದು ಬಹುದೊಡ್ಡ ಕ್ರಾಂತಿ’ ಎಂದು ಹೇಳಿದರು.

ADVERTISEMENT

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ಕೆಲವು ಸಾಕ್ಷಿಗಳಿಂದ ಕಥನ ಚರಿತ್ರೆ ಕಟ್ಟುವುದು ಸುಲಭವಲ್ಲ. ಸಿಕ್ಕಿರುವ ಕೆಲವು ಆಕರಗಳಿಂದ ಮಹಾತ್ಮ ಎಂಬಾರ್‌ ಜೀಯರ್‌ ಅವರ ‘ಕೊಪ್ಪದ ಕಾಂತಿ’ ಕೃತಿ ರಚಿಸಿದ್ದಾರೆ. ಇದು ಸವಾಲಿನ ಕೆಲಸ. ವಿಶ್ವವಿದ್ಯಾಲಯಗಳು ಮಾಡುವ ಕೆಲಸವನ್ನು ಮಾಯಣ್ಣಸ್ವಾಮಿಯವರು ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್‌) ಪ್ರಧಾನ ವ್ಯವಸ್ಥಾಪಕ ಪ್ರದೀಪ್‌ ಕುಮಾರ್‌ ಸೇಠಿಯ ಕಾರ್ಯಕ್ರಮ ಉದ್ಘಾಟಿಸಿದರು. ಕವಿ ಸುಬ್ಬು ಹೊಲೆಯಾರ್, ನಿವೃತ್ತ ಉಪನ್ಯಾಸಕ ಗೋಪಾಲ ಅಯ್ಯಂಗಾರ್‌, ಉಪನ್ಯಾಸಕ ಹುಲಿಕುಂಟೆ ಮೂರ್ತಿ, ಲೇಖಕ ಮಾಯಣ್ಣಸ್ವಾಮಿ ಕಿರಂಗೂರು ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.