ADVERTISEMENT

ಬೆಂಗಳೂರು ವಿಸ್ತರಣೆಗೆ ಅವಕಾಶ ನೀಡಬೇಡಿ: ಸಿಎಂಗೆ ‘ಮುಖ್ಯಮಂತ್ರಿ’ ಚಂದ್ರು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 14:33 IST
Last Updated 12 ಜುಲೈ 2024, 14:33 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಬೆಂಗಳೂರು: ‘ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ಪ್ರಸ್ತಾವವನ್ನು ತಿರಸ್ಕರಿಸಬೇಕು. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಮತ್ತಷ್ಟು ವಿಸ್ತರಿಸಲು ಅವಕಾಶ ನೀಡಬಾರದು’ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಆಗ್ರಹಿಸಿದ್ದಾರೆ. 

ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ‘ರಾಜ್ಯದ ಜನರ ತೆರಿಗೆ ಹಣವನ್ನು ಬೆಂಗಳೂರು ವಿಸ್ತರಿಸಲು ಮಾತ್ರ ವಿನಿಯೋಗಿಸಿದರೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಜನರು ಏನು ಮಾಡಬೇಕು? ಈಗಾಗಲೇ ಹೆಚ್ಚಿನ ಯುವಕರು ಉದ್ಯೋಗಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡುವ ಬದಲು ಹೈದರಾಬಾದ್‌, ಪುಣೆ, ಮುಂಬೈ, ಪಣಜಿಯಂತಹ ನೆರೆ ರಾಜ್ಯಗಳ ನಗರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಕೇಂದ್ರೀಕರಿಸಿದ ಅಭಿವೃದ್ಧಿಯಿಂದ ಯುವಕರೆಲ್ಲ ಬೇರೆ ರಾಜ್ಯಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದ್ದಾರೆ.

‘ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗ ಪ್ರಸ್ತಾವ ಸಲ್ಲಿಸಿರುವುದು ಕೇವಲ ಜಿಲ್ಲೆಯ ಹೆಸರು ಬದಲಾವಣೆಗಲ್ಲ, ಕರಾಳ ರಿಯಲ್‌ ಎಸ್ಟೇಟ್‌ ದಂಧೆಗೆ ಪರವಾನಗಿ ಪಡೆಯುವ ಪ್ರಸ್ತಾವವಾಗಿದೆ. ರಾಮನಗರವನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿ, ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಿಸಿದರೆ ಕೆಲವು ಭೂ ಮಾಲೀಕರಿಗೆ ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಜನರಿಗೆ ಯಾವುದೇ ಉಪಯೋಗವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.