ADVERTISEMENT

ಕಲಾಗಂಗೋತ್ರಿಯ ಸುವರ್ಣ ಸಂಭ್ರಮ 27ರಿಂದ

29ರಿಂದ ಜ. 2ರವರೆಗೆ ನಾಟಕೋತ್ಸವ, ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:57 IST
Last Updated 23 ಡಿಸೆಂಬರ್ 2021, 19:57 IST
‘ಮುಖ್ಯಮಂತ್ರಿ’ ನಾಟಕದ ದೃಶ್ಯ
‘ಮುಖ್ಯಮಂತ್ರಿ’ ನಾಟಕದ ದೃಶ್ಯ   

ಬೆಂಗಳೂರು: ಕನ್ನಡ ರಂಗಸಂಸ್ಥೆಕಲಾಗಂಗೋತ್ರಿ ಸುವರ್ಣ ಸಂಭ್ರಮದಲ್ಲಿದ್ದು ಆ ಪ್ರಯುಕ್ತ ಇದೇ 29ರಿಂದ 2022ರ ಜ. 2ರವರೆಗೆ ನಾಟಕೋತ್ಸವ, ಸನ್ಮಾನ, ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡಿದೆ.

‘ಈ ಅವಧಿಯಲ್ಲಿ ನಗರದ ರಂಗ ಶಂಕರದಲ್ಲಿ 5 ನಾಟಕಗಳು ಪ್ರದರ್ಶನಗೊಳ್ಳಲಿವೆ’ ಎಂದು ಕಲಾಗಂಗೋತ್ರಿ ಅಧ್ಯಕ್ಷ ಬಿ.ವಿ.ರಾಜಾರಾಂ ಬುಧವಾರ ಸುವರ್ಣ ಸಂಭ್ರಮಕ್ಕೆ ಚಾಲನೆ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇದೇ 27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ಮುಖ್ಯಮಂತ್ರಿ’ ನಾಟಕದ ಸಹಾಯಾರ್ಥ ಪ್ರದರ್ಶನವಿರುತ್ತದೆ. ರವೀಂದ್ರ ಕಲಾಕ್ಷೇತ್ರದ ನಿವೃತ್ತ ನೌಕರ ಪಾರ್ಕ್ ಶ್ರೀನಿವಾಸ್ ಅವರ ವೈದ್ಯಕೀಯ ವೆಚ್ಚ ಭರಿಸಲು ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ‘1970ರಲ್ಲಿ ರಾಜಾರಾಂ, ಚಂದ್ರು ನನಗೆ ಸ್ನೇಹಿತರಾದರು. ಈ ಸಂಸ್ಥೆಯ ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ ಈಗಾಗಲೇ 750 ಪ್ರದರ್ಶನ ಕಂಡಿದೆ. ಅಷ್ಟರಲ್ಲೂ ಚಂದ್ರು ಅವರು ಅಭಿನಯಿಸಿದ್ದಾರೆ. ಕಲಾಗಂಗೋತ್ರಿಯ ಕಲಾವಿದರು ಭಾರತದಾದ್ಯಂತ ಸಂಚರಿಸಿ 3,250ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ’ ಎಂದು ಹೇಳಿದರು.

‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ರಾಜಾರಾಮ್ ಅವರು ಈ ಸಂಸ್ಥೆಯನ್ನು 50 ವರ್ಷಗಳವರೆಗೆ ಮುನ್ನಡೆಸಿದ್ದಾರೆ. ನನಗೆ ಶಾಶ್ವತವಾಗಿ ‘ಮುಖ್ಯಮಂತ್ರಿ’ ಸ್ಥಾನ ತಂದುಕೊಟ್ಟ ನಾಟಕವಿದು. ನಾನು ಹೋರಾಟ, ರಂಗಭೂಮಿ, ಸಿನಿಮಾ ಮೂರೂ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದೇನೆ. ಇವತ್ತಿನ ರಾಜಕಾರಣಕ್ಕೆ ಆಪ್ತವಾಗಿರುವಂತೆ ಕೆ.ವೈ. ನಾರಾಯಣಸ್ವಾಮಿ ಅವರು ರಚಿಸಿದ ನಾಟಕ ಮತ್ತೆ ಮುಖ್ಯಮಂತ್ರಿ ಪ್ರದರ್ಶನಗೊಳ್ಳಲಿದೆ. ಇದನ್ನು ವೀಕ್ಷಿಸಲು ರಾಜಕಾರಣಿಗಳು ಹಾಗೂ ಮುಖ್ಯಮಂತ್ರಿಯವರಿಗೂ ಆಹ್ವಾನ ನೀಡಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.