ADVERTISEMENT

ರೈತಸ್ನೇಹಿ ‘ಬಹುಬೆಳೆ ಸಂಸ್ಕರಣಾ’ ಯಂತ್ರ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ, ₹50 ಸಾವಿರಕ್ಕೆ ಮಾರಾಟ

ಖಲೀಲಅಹ್ಮದ ಶೇಖ
Published 13 ನವೆಂಬರ್ 2024, 23:50 IST
Last Updated 13 ನವೆಂಬರ್ 2024, 23:50 IST
ಬಹುಬೆಳೆ ಸಂಸ್ಕರಣಾ ಯಂತ್ರ
ಬಹುಬೆಳೆ ಸಂಸ್ಕರಣಾ ಯಂತ್ರ   

ಬೆಂಗಳೂರು: ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಕಡಲೆಕಾಯಿ, ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಹರಳು ಬೀಜಗಳನ್ನು ಸಂಸ್ಕರಿಸುವ ‘ಬಹು–ಬೆಳೆ ಸಂಸ್ಕರಣಾ’ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೊಯ್ಲೋತ್ತರ ತಾಂತ್ರಿಕ ವಿಭಾಗದ ವಿಜ್ಞಾನಿಗಳು ಎರಡು ವರ್ಷಗಳ ಸಂಶೋಧನೆ ನಡೆಸಿ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ರೈತರಿಗಲ್ಲದೇ, ಸಂಸ್ಕರಣೆದಾರರು, ಗುಡಿ ಕೈಗಾರಿಕೋದ್ಯಮಿಗಳು, ಹೋಟೆಲ್‌ ಉದ್ಯಮ ನಡೆಸುವವರಿಗೂ ಈ ಯಂತ್ರ ಉಪಯುಕ್ತವಾಗಲಿದೆ. ಇದು ದೇಶಿಯ ಸಂಸ್ಕರಣಾ ಉದ್ಯಮಕ್ಕೆ ನೆಲಗಡಲೆ, ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ಕಚ್ಚಾ ವಸ್ತುಗಳ ಲಭ್ಯತೆಯನ್ನು ಹೆಚ್ಚಿಸಲಿದೆ. 

ADVERTISEMENT

‘ಕಡಲೆಕಾಯಿ, ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಹರಳನ್ನು ರೈತರು ಸದ್ಯ ಕೈಗಳಿಂದ ಸಂಸ್ಕರಣೆ ಮಾಡುತ್ತಿದ್ದಾರೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ಶ್ರಮದಾಯಕವೂ ಆಗಿದೆ. ಕಾರ್ಮಿಕ ವೆಚ್ಚವೂ ರೈತರಿಗೆ ಹೊರೆಯಾಗಲಿದೆ. ಸದ್ಯ ನಗರ ಪ್ರದೇಶಗಳಲ್ಲಿ ಒಂದೊಂದು ಬೆಳೆಗೆ ಒಂದೊಂದು ಯಂತ್ರಗಳಿದ್ದು, ಇವುಗಳಲ್ಲಿ ದೊಡ್ಡ ಪ್ರಮಾಣದಲ್ಲಷ್ಟೇ ಧಾನ್ಯಗಳನ್ನು ಸಂಸ್ಕರಿಸಬಹುದಾಗಿದೆ. ಆದ್ದರಿಂದ, ನಾವು ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಪ್ರಮಾಣದಲ್ಲಿ, ನಾಲ್ಕು ಬೆಳೆಗಳನ್ನು ಸಂಸ್ಕರಿಸುವಂತಹ ಈ ಯಂತ್ರವನ್ನು ಅಭಿವೃದ್ಧಿಪಡಿಸಿದ್ದೇವೆ. ಕಡಿಮೆ ಸಮಯದಲ್ಲಿ ರೈತರು ತಮ್ಮ ಉತ್ಪನ್ನಗಳಿಂದ ಹೆಚ್ಚು ಲಾಭ ಪಡೆದುಕೊಳ್ಳಬಹುದು’ ಎಂದು ಕೊಯ್ಲೋತ್ತರ ತಾಂತ್ರಿಕ ವಿಭಾಗದ ಪ್ರಾಧ್ಯಾಪಕ ಎಂ. ಮಂಜುನಾಥ್ ತಿಳಿಸಿದರು.

ಕಾರ್ಯಾಚರಣೆ ವಿಧಾನ: ಬಹು ಬೆಳೆ ಸಂಸ್ಕರಣಾ ಯಂತ್ರವು(4–ಇನ್‌–1) 0.5 ಎಚ್‌.ಪಿಯಿಂದ 1 ಎಚ್‌.ಪಿವರೆಗಿನ ಸಿಂಗಲ್‌ಫೇಸ್‌ ಎಲೆಕ್ಟ್ರಿಕ್‌ ಮೋಟಾರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಯಂತ್ರವು ಪ್ರತಿ ಗಂಟೆಗೆ ನೆಲಗಡಲೆ ಗಿಡದಿಂದ 50 ಕೆ.ಜಿ. ಕಾಯಿಗಳನ್ನು ಬೇರ್ಪಡಿಸುತ್ತದೆ.  120 ಕೆ.ಜಿ. ಕಡಲೆಕಾಯಿಯನ್ನು ಸುಲಿಯುತ್ತದೆ. 250 ಸೂರ್ಯಕಾಂತಿ ಮತ್ತು ಮೆಕ್ಕೆಜೋಳದ ತೆನೆಗಳಿಂದ ಬೀಜಗಳನ್ನು ಬೇರ್ಪಡಿಸಲಿದೆ. ಸಂಸ್ಕರಣೆ ಸಂದರ್ಭದಲ್ಲಿ ಬೀಜಗಳಿಗೆ ಹೆಚ್ಚು ಹಾನಿ ಆಗುವುದಿಲ್ಲ’ ಎಂದು ಅವರು ವಿವರಿಸಿದರು.

‘ಶೇಕಡ 98ರಷ್ಟು ನಿಖರತೆ’

‘ಈ ಬಹುಬೆಳೆ ಸಂಸ್ಕರಣ ಯಂತ್ರವು ತೆನೆ ಅಥವಾ ಗಿಡಗಳಿಂದ ಬೀಜಗಳನ್ನು ಬೇರ್ಪಡಿಸುವ ಸಂದರ್ಭದಲ್ಲಿ ಶೇ 98ರಷ್ಟು ನಿಖರತೆ ಒಳಗೊಂಡಿದೆ. ಈ ಯಂತ್ರದಿಂದ ಸಂಸ್ಕರಿಸಿದ ಶೇ 95ರಷ್ಟು ಬೀಜಗಳು ಮೊಳಕೆಯೊಡೆಯುತ್ತವೆ ಎಂದು ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಈ ಯಂತ್ರಕ್ಕೆ ₹50 ಸಾವಿರ ದರ ನಿಗದಿಪಡಿಸಲಾಗಿದ್ದು ರೈತರು ನೇರವಾಗಿ ಕೃಷಿ ವಿಶ್ವವಿದ್ಯಾಲಯದಿಂದ ಖರೀದಿಸಬಹುದು’ ಎಂದರು.

ಕೃಷಿ ಮೇಳಕ್ಕೆ ಚಾಲನೆ

ಇಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನವೆಂಬರ್‌ 14ರಿಂದ 17ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಹವಾಮಾನ ಚತುರ ಡಿಜಿಟಲ್‌ ಕೃಷಿ’ ಎಂಬ ಘೋಷವಾಕ್ಯದಡಿ ಕೃಷಿ ಮೇಳಕ್ಕೆ ಬೆಳಿಗ್ಗೆ 10ಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.