ADVERTISEMENT

ಮುಗಿದರೂ ಕಾಮಗಾರಿ..ಬಳಕೆಗೆ ಇಲ್ಲಾ ರೀ: ಆರಂಭದಲ್ಲೇ ಮುಚ್ಚಿದ ಪಾರ್ಕಿಂಗ್ ಕಟ್ಟಡ

ವಾಹನ ನಿಲುಗಡೆ ಸಂಕೀರ್ಣ: ಆರಂಭದಲ್ಲೇ ಬಾಗಿಲು ಮುಚ್ಚಿದ ಕಟ್ಟಡ

ಅದಿತ್ಯ ಕೆ.ಎ.
Published 12 ಡಿಸೆಂಬರ್ 2022, 4:21 IST
Last Updated 12 ಡಿಸೆಂಬರ್ 2022, 4:21 IST
ಕಾಳಿದಾಸ ರಸ್ತೆಯ ಬದಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು
ಕಾಳಿದಾಸ ರಸ್ತೆಯ ಬದಿಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು   

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದ ಬಳಿಬಿಬಿಎಂಪಿ ನಿರ್ಮಿಸಿರುವ ‘ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣ’ದ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳಾದರೂ ಉದ್ಘಾಟನೆಗೆ ಕಾಲ ಕೂಡಿಬಂದಿಲ್ಲ.

ಕಾಳಿದಾಸ ರಸ್ತೆ, ಕನಕದಾಸ ರಸ್ತೆ, ಶೇಷಾದ್ರಿಪುರಂ ರಸ್ತೆ, ಗಾಂಧಿ ನಗರದ ಸುತ್ತಮುತ್ತ ಪಾರ್ಕಿಂಗ್‌ ಸಮಸ್ಯೆ ತೀವ್ರವಾಗಿದ್ದು, ಈಗಲೂ ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿವೆ. ವಾಹನ ಸವಾರರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಿಬಿಎಂಪಿಯು ನಗರೋತ್ಥಾನ ಯೋಜನೆ ಅಡಿ ₹ 78 ಕೋಟಿ ಅನುದಾನದಲ್ಲಿ ಈ ಕಟ್ಟಡವನ್ನು ನಿರ್ಮಿಸಿದೆ. 2017ರಲ್ಲಿ ಈ ಕಾಮಗಾರಿ ಆರಂಭವಾಗಿತ್ತು. 2021ರ ಡಿಸೆಂಬರ್‌ಗೆ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ, ಲಾಕ್‌ಡೌನ್‌ ವೇಳೆ ಕಾರ್ಮಿಕರ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ, ಸಂಕೀರ್ಣ ಉದ್ಘಾಟಿಸಿ ವಾಹನ ಚಾಲಕರ ಬಳಕೆಗೆ ಅವಕಾಶ ನೀಡಲು ಬಿಬಿಎಂಪಿ ಅಧಿಕಾರಿಗಳು ವಿಳಂಬ ಧೋರಣೆ ತಳೆದಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ADVERTISEMENT

ಕಟ್ಟಡದ ನಿರ್ವಹಣೆಗೆಂದು ಬಿಬಿಎಂಪಿ ಎರಡು ಬಾರಿ ಟೆಂಡರ್‌ ಕರೆದಿದ್ದರೂ ಯಾರೂ ಆಸಕ್ತಿ ತೋರಿಲ್ಲ. ಮತ್ತೊಂದೆಡೆ ಕಟ್ಟಡ ಗುತ್ತಿಗೆದಾರರಿಗೆ ಕೊನೆಯ ಕಂತಿನ ಹಣವು ಬಿಡುಗಡೆಯಾಗಿಲ್ಲ. ಇದೇ ಕಾರಣಕ್ಕೆ ಉದ್ಘಾಟನೆ ವಿಳಂಬವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೃದಯ ಭಾಗದಲ್ಲಿ ಪಾರ್ಕಿಂಗ್‌ ಸಮಸ್ಯೆ ತೀವ್ರ:

ರಾಜಧಾನಿಯಲ್ಲಿ ಒಂದೆಡೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಿಧಾನಸೌಧ, ಹೈಕೋರ್ಟ್‌, ಜಿಲ್ಲಾ ನ್ಯಾಯಾಲಯ ಹಾಗೂ ಸಿಟಿ ಸಿವಿಲ್‌ ಕೋರ್ಟ್‌, ನಗರ ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್‌ ವೃತ್ತ, ಆರ್‌ಬಿಐ, ಕಂದಾಯ ಭವನ, ಸೆಂಟ್ರಲ್‌ ಕಾಲೇಜು, ಚಿಕ್ಕಪೇಟೆ, ಅರಮನೆ ರಸ್ತೆ, ಕಬ್ಬನ್ ಪಾರ್ಕ್‌ಗೆ ತೆರಳುವವರು ವಾಹನ ನಿಲುಗಡೆಗೆ ಈಗಲೂ ಪರದಾಡುತ್ತಿದ್ದಾರೆ. ವಾಹನ ನಿಲುಗಡೆಗೆಂದೇ ಪ್ರತ್ಯೇಕವಾದ ಸಂಕೀರ್ಣ ನಿರ್ಮಿಸಿದ್ದರೂ ಅದನ್ನು ಬಳಸಿಕೊಳ್ಳಲು ಬಿಬಿಎಂಪಿ ಅಧಿಕಾರಿ ಗಳು ಹಿಂದೇಟು ಹಾಕುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸರ ಸಾಹಸ:

ಮೆಜೆಸ್ಟಿಕ್‌, ಸ್ವಾತಂತ್ರ್ಯ ಉದ್ಯಾನ, ಗಾಂಧಿ ನಗರದ ಸುತ್ತಲಿನ ರಸ್ತೆಗಳು ನಿತ್ಯವೂ ವಾಹನ ದಟ್ಟಣೆಯಿಂದ ಕೂಡಿರುತ್ತವೆ. ಪೊಲೀಸರಿಗೆ ಬೆಳಿಗ್ಗೆ ಮತ್ತು ಸಂಜೆಯಲ್ಲಿ ವಾಹನ ನಿಯಂತ್ರಿಸುವುದೇ ಸವಾಲಿನಿಂದ ಕೂಡಿದೆ. ಜಾಗದ ಸಮಸ್ಯೆಯಿಂದ ಈ ಭಾಗದಲ್ಲಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸಲಾಗುತ್ತಿದೆ. ಫ್ರೀಡಂ ಪಾರ್ಕ್‌ ಸುತ್ತಮುತ್ತ ಸರ್ಕಾರಿ ಕಚೇರಿಗಳು, ಕಾಲೇಜುಗಳಿವೆ. ಪ್ರಮುಖ ವೃತ್ತದಲ್ಲಿಯೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಗಾಂಧಿ ನಗರ ಹಾಗೂ ಮೆಜಿಸ್ಟಿಕ್‌ ಭಾಗದಲ್ಲಿ ದ್ವಿಚಕ್ರಗಳ ಕಳವು ಹೆಚ್ಚುತ್ತಿದೆ. ಕಟ್ಟಡ ಉದ್ಘಾಟಿಸಿ ವಾಹನ ಚಾಲಕರ ಬಳಕೆಗೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹೊಸ ಕಟ್ಟಡದಲ್ಲಿ ಒಂದು ಲಕ್ಷ ಲೀಟರ್‌ ಮಳೆ ನೀರು ಸಂಗ್ರಹ ವ್ಯವಸ್ಥೆ, ಕಟ್ಟಡ ಒಳಭಾಗಕ್ಕೆ ನೈಸರ್ಗಿಕ ಬೆಳಕಿನ ವ್ಯವಸ್ಥೆ ಹಾಗೂ ಏಕಕಾಲದಲ್ಲಿ 556 ಕಾರುಗಳು, 445 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆಯಿದೆ. ಚಾವಣಿಯಲ್ಲಿ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದೆ. ಕಟ್ಟಡ ಒಳಾಂಗಣದಲ್ಲೂ ಬಣ್ಣ ಬಳಿದಿದ್ದು ಕಟ್ಟಡವು ಸುಂದರ, ಆಕರ್ಷಕವಾಗಿ ಕಾಣಿಸುತ್ತಿದೆ. ಉತ್ಪಾದನೆಯಾದ ಹೆಚ್ಚುವರಿ ವಿದ್ಯುತ್‌ ಮಾರಾಟ ಮಾಡುವ ಆಶಯವೂ ಈಡೇರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.