ಬೆಂಗಳೂರು: ನಗರದಲ್ಲಿ ಶುಕ್ರವಾರ (ಅಗಸ್ಟ್ 19) ನಿಗದಿಪಡಿಸಿದ್ದ ಮುನವ್ವರ್ ಫಾರೂಕಿ ಅವರ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮವನ್ನು ಅನುಮತಿ ಸಿಗದ ಕಾರಣ ದಿಢೀರ್ ರದ್ದು ಮಾಡಲಾಗಿದೆ.
‘ಜೆ.ಪಿ. ನಗರದ ಎಂ.ಎನ್.ಆರ್ ಕನ್‌ವೆನ್ಶನ್ ಸಭಾಭವನದಲ್ಲಿ ಕಾರ್ಯಕ್ರಮ ಇರುವುದಾಗಿ ಜಾಹೀರಾತು ನೀಡಲಾಗಿತ್ತು. ಜಾಲತಾಣದ ಮೂಲಕ ಟಿಕೆಟ್ ಮಾರಾಟವೂ ನಡೆದಿತ್ತು. ಕಾರ್ಯಕ್ರಮಕ್ಕೆ ಹೋಗಲು ಹಲವರು ಸಿದ್ಧರಾಗಿದ್ದರು. ಆದರೆ, ಕಾರ್ಯಕ್ರಮ ವನ್ನು ರದ್ದುಪಡಿಸಿರುವುದಾಗಿ ಸಂಘಟಕರು ಘೋಷಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಳೆದ ವರ್ಷ ಮುನ್ರೋ ಕೆಫೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಮುನವ್ವರ್, ಧರ್ಮ, ದೇವತೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಸಂಬಂಧ ಅವರನ್ನು ಬಂಧಿಸಲಾಗಿತ್ತು. 37 ದಿನ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಹೊರಬಂದಿದ್ದರು. ಇದಾದ ನಂತರ, ಹಲವೆಡೆ ಅವರ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿತ್ತು’ ಎಂದು ತಿಳಿಸಿವೆ.
‘2021ರ ನ. 28ರಂದು ಅಶೋಕನಗರ ಬಳಿಯ ‘ಗುಡ್ ಶೆಫರ್ಡ್’ ಸಭಾಂಗಣದಲ್ಲಿ ‘ಡೊಂಗ್ರಿ ಟು ನೋವೇರ್’ ಹೆಸರಿನಲ್ಲಿ ಮುನವ್ವರ್ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ‘ಕಾರ್ಯಕ್ರಮದಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆಗುತ್ತದೆ’ ಎಂಬುದಾಗಿ ಪೊಲೀಸರು ನೋಟಿಸ್ ನೀಡಿದ್ದರಿಂದ ಈ ಕಾರ್ಯಕ್ರಮವನ್ನೂ ರದ್ದುಪಡಿಸಲಾಗಿತ್ತು’ ಎಂದೂ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.