ADVERTISEMENT

ಸಚಿವ ಸ್ಥಾನಕ್ಕಾಗಿ ಮುನಿರತ್ನ ಮಾಜಿ ಸಿಎಂಗಳಿಗೆ ಹನಿಟ್ರ್ಯಾಪ್: ಸಂತ್ರಸ್ತೆಯ ಆರೋಪ

ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಸಂತ್ರಸ್ತೆಯ ಆರೋಪ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 13:52 IST
Last Updated 9 ಅಕ್ಟೋಬರ್ 2024, 13:52 IST
ಮುನಿರತ್ನ 
ಮುನಿರತ್ನ    

ಬೆಂಗಳೂರು: ‘ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್‌ ಮಾಡಿ, ಬ್ಲ್ಯಾಕ್‌ಮೇಲ್‌ ಮಾಡುವ ಮೂಲಕ ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ಅವರು ಸಚಿವ ಸ್ಥಾನ ಪಡೆದುಕೊಂಡಿದ್ದರು’ ಎಂದು ಸಂತ್ರಸ್ತೆಯೊಬ್ಬರು ಆರೋಪಿಸಿದರು.

ಮುನಿರತ್ನ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ, ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ಸಂತ್ರಸ್ತೆ ದೂರು ಸಲ್ಲಿಸಿದ್ದರು. ಅದನ್ನು ಆಧರಿಸಿ, ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ನನಗೆ ಸೂಕ್ತ ಭದ್ರತೆ ಒದಗಿಸಿದರೆ ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್‌ ಮಾಡಿರುವ ಸಾಕ್ಷ್ಯಾಧಾರಗಳನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನೀಡುತ್ತೇನೆ. ಈ ಪ್ರಕರಣದಲ್ಲಿ ಐದರಿಂದ ಆರು ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಮುನಿರತ್ನ ಅವರು 2020ರಲ್ಲಿ ಪರಿಚಯವಾಗಿದ್ದರು. ನಂತರ ನನ್ನ ಮೊಬೈಲ್‌ ಸಂಖ್ಯೆ ಪಡೆದುಕೊಂಡು, ವಿಡಿಯೊ ಕರೆಗಳನ್ನು ಮಾಡುತ್ತಿದ್ದರು. ಕರೆ ಸ್ವೀಕರಿಸದಿದ್ದಾಗ, ಕರೆ ಸ್ವೀಕರಿಸುವಂತೆ ಒತ್ತಾಯಿಸುತ್ತಿದ್ದರು. ಮುನಿರತ್ನ ಅವರು ನನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದರು. ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಆ ವಿಡಿಯೊ ತೋರಿಸಿ, ಬೇರೆ–ಬೇರೆ ಕೃತ್ಯಗಳನ್ನು ಮಾಡುವಂತೆ ನನ್ನನ್ನು ಒತ್ತಾಯಿಸಿದ್ದರು’ ಎಂದು ದೂರಿದರು.

‘ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳು, ಮಾಜಿ ಸಚಿವರು ಮತ್ತು ಶಾಸಕರನ್ನು ಹನಿಟ್ರ್ಯಾಪ್‌ ಮಾಡಲು ನನ್ನನ್ನೂ ಸೇರಿದಂತೆ ಬಹಳಷ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಏಳೆಂಟು ಮಂದಿ ಸಂತ್ರಸ್ತೆಯರಿದ್ದು, ಇದರಲ್ಲಿ ನಾಲ್ವರು ಎಚ್‌ಐವಿ ಸೋಂಕಿತೆಯರು. ಇವರಲ್ಲಿ ಒಬ್ಬ ಮಹಿಳೆಯನ್ನು ಬಳಸಿಕೊಂಡು ಬಿಬಿಎಂಪಿ ಮಾಜಿ ಸದಸ್ಯೆಯೊಬ್ಬರ ಪತಿಯನ್ನು ಹನಿಟ್ರ್ಯಾಪ್ ಮಾಡಲು ಮುನಿರತ್ನ ಬಳಸಿಕೊಂಡಿದ್ದರು’ ಎಂದು ಹೇಳಿದರು.

‘ಯಾರನ್ನಾದರೂ ಹನಿಟ್ರ್ಯಾಪ್‌ ಮಾಡಬೇಕಾದರೆ, ಆ ಕೃತ್ಯವನ್ನು ಚಿತ್ರೀಕರಿಸಿಕೊಳ್ಳಲು ಅವರದೇ ಆದ ವಿಶೇಷ ಮೊಬೈಲ್‌ಗಳನ್ನು ನೀಡುತ್ತಿದ್ದರು. ಇದೆಲ್ಲವನ್ನು ಮುನಿರತ್ನ ಅವರ ಸಂಬಂಧಿ ಸುಧಾಕರ್‌ , ರಾಮಚಂದ್ರ ನಾಯ್ಡು ಅವರು ನಿರ್ವಹಣೆ ಮಾಡುತ್ತಿದ್ದರು. ಸುಧಾಕರ್‌ ಅವರು ಇಲ್ಲದ ಸಂದರ್ಭದಲ್ಲಿ ಕೆಲವು ವಿಡಿಯೊಗಳನ್ನು ನನ್ನ ಮೊಬೈಲ್‌ಗೆ ಶೇರ್‌ ಮಾಡಿಕೊಂಡಿದ್ದೆ. ನಮ್ಮ ವೈಯಕ್ತಿಕ ಮೊಬೈಲ್‌ಗಳನ್ನು ಬಳಸಲು ಅವಕಾಶ ನೀಡುತ್ತಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.