ADVERTISEMENT

ನಕಲಿ ಗುರುತಿನ ಚೀಟಿ ಪತ್ತೆ: ಗೃಹ ಇಲಾಖೆ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:10 IST
Last Updated 7 ಫೆಬ್ರುವರಿ 2019, 19:10 IST

ಬೆಂಗಳೂರು: ‘2018ರ ರಾಜ್ಯ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಪೊಲೀಸರು ಯಾವುದೇ ಕ್ರಮ ಜರುಗಿಸಿಲ್ಲ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌, ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಈ ಕುರಿತಂತೆ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಈ ಪ್ರಕರಣದಲ್ಲಿ ಹಾಲಿ ಶಾಸಕ ಮುನಿರತ್ನ ಆರೋಪಿಯಾಗಿದ್ದಾರೆ. ಆದರೆ, ಅವರು ನಾಪತ್ತೆಯಾಗಿದ್ದಾರೆ ಎಂದುಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ವಾಸ್ತವದಲ್ಲಿ ಮುನಿರತ್ನ ಬಹಿರಂಗ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಧಿವೇಶನದಲ್ಲೂ ಭಾಗಿಯಾಗಿದ್ದಾರೆ’ ಎಂದರು.

ADVERTISEMENT

‘ಪೊಲೀಸರು ಮುನಿರತ್ನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಅವರನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿದರು.

ಇದಕ್ಕೆ ನ್ಯಾಯಪೀಠ, ‘ಮೊದಲು ನೋಟಿಸ್ ಜಾರಿ ಮಾಡೋಣ. ನಂತರ ಅವರಿಂದ ಉತ್ತರ ಬಂದ ಮೇಲೆ ಮುಂದಿನ ಆದೇಶ ನೀಡೋಣ’ ಎಂದು ಹೇಳಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: 2018ರ ಮೇ 8ರಂದು ಜಾಲಹಳ್ಳಿ ಸಮೀಪದ ಫ್ಲ್ಯಾಟ್‌ವೊಂದರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ಅವರ ಕರಪತ್ರದ ಜೊತೆಗೆ, ಸುಮಾರು10 ಸಾವಿರಕ್ಕೂ ಹೆಚ್ಚು ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದವು.

ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ಜಾಲಹಳ್ಳಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಈತನಕ ಈ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸಿಲ್ಲ ಎಂಬುದು ಅರ್ಜಿದಾರರ ಆಕ್ಷೇಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.