ಬೆಂಗಳೂರು: ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸಂಬಂಧ ಹಲವು ಮಾಹಿತಿ ಕಲೆ ಹಾಕಿರುವ ಸಿಐಡಿಯ ವಿಶೇಷ ತನಿಖಾ ದಳವು (ಎಸ್‌ಐಟಿ), ಗುರುವಾರ ವಿವಿಧ ಸ್ಥಳದಲ್ಲಿ ಮಹಜರು ನಡೆಸಿತು.
ಮುನಿರತ್ನ ಅತ್ಯಾಚಾರ ನಡೆಸಿದ್ದರು ಎನ್ನಲಾದ ಜೆ.ಪಿ. ಪಾರ್ಕ್ ಬಳಿಯ ಗೋದಾಮಿಗೆ ಎಸ್‌ಐಟಿ ಅಧಿಕಾರಿಗಳು, ಸಂತ್ರಸ್ತೆಯನ್ನು ಕರೆದೊಯ್ದು ಮಹಜರು ನಡೆಸಿದರು. ಜತೆಗೆ, ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿಗೆ ಮನೆಯೊಂದರಲ್ಲಿ ಮಹಜರು ನಡೆಸಿ, ಸಾಕ್ಷ್ಯಾಧಾರ ಕಲೆ ಹಾಕಿದರು.
‘ಮಹಜರು ನಡೆಸಿ, ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲು ಮಾಡಿಕೊಳ್ಳಲಾಗಿದೆ. ಸಂತ್ರಸ್ತೆಯ ಮೊಬೈಲ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ರವಾನೆ ಮಾಡಲಾಗಿದೆ. ಮುನಿರತ್ನ ಅವರ ಆಪ್ತ ಸಹಾಯಕನ ವಿಚಾರಣೆ ನಡೆಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.