ಬೆಂಗಳೂರು: ಪತ್ನಿಯ ಕುತ್ತಿಗೆಯನ್ನು ದುಪಟ್ಟಾದಿಂದ ಬಿಗಿದು ಕೊಲೆ ಮಾಡಿ, ನಾಲ್ಕು ವರ್ಷದ ಮಗು ಜತೆಗೆ ಪರಾರಿ ಆಗಿರುವ ಆರೋಪಿ ಪತ್ತೆಗೆ ಚಂದ್ರಾ ಲೇಔಟ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಗಂಗೊಂಡನಹಳ್ಳಿಯ ಮೂರನೇ ಮುಖ್ಯರಸ್ತೆಯ ನಿವಾಸಿ ಗೌಸಿಯಾ ಬಿ (31) ಎಂಬುವವರನ್ನು ಪತಿ ಇಮ್ರಾನ್ ಖಾನ್ ಕೊಲೆ ಮಾಡಿದ್ದಾರೆ ಎಂಬ ಆರೋಪವಿದ್ದು, ಈ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೌಸಿಯಾ ಅವರ ಸಹೋದರ ಜಮೀರ್ ಉಲ್ಲಾ ಖಾನ್ ನೀಡಿರುವ ದೂರಿನನ್ವಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿ ತಲೆಮರೆಸಿಕೊಂಡಿರುವ ಸ್ಥಳದ ಸುಳಿವು ಸಿಕ್ಕಿದ್ದು ಸದ್ಯದಲ್ಲೇ ಬಂಧಿಸಲಾಗುವುದು’ ಎಂದು ಪೊಲೀಸರು ಹೇಳಿದರು.
‘ಗಂಗೊಂಡನಹಳ್ಳಿಯ ಸಮೀವುಲ್ಲಾ ಖಾನ್ ಅವರ ಪುತ್ರ ಇಮ್ರಾನ್ ಖಾನ್ ಅವರ ಜತೆಗೆ ಗೌಸಿಯಾ ಅವರ ವಿವಾಹ ನಡೆದಿತ್ತು. ದಂಪತಿಗೆ ನಾಲ್ಕು ವರ್ಷದ ಗಂಡು ಮಗುವಿದೆ. ಇಮ್ರಾನ್ ಖಾನ್ ಅವರು ಗಂಗೊಂಡನಹಳ್ಳಿಯ ಮೂರನೇ ಅಡ್ಡರಸ್ತೆಯ ಇಸ್ಮಾಯಿಲ್ ಅವರ ಅಂಗಡಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ದಂಪತಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಇತ್ತೀಚೆಗೆ ಗಲಾಟೆ ಮಾಡಿಕೊಳ್ಳುತ್ತಿದ್ದರು’ ಎಂದು ಆರೋಪಿಸಿ ಗೌಸಿಯಾ ಸಹೋದರ ನೀಡಿರುವ ದೂರು ಆಧರಿಸಿ, ಎಫ್‌ಐಆರ್ ದಾಖಲಿಸಲಾಗಿದೆ.
‘ಗಲಾಟೆಯಿಂದ ಬೇಸತ್ತು ಗೌಸಿಯಾ ಅವರು ಮಗು ಜತೆಗೆ ತವರು ಮನೆಗೆ ಬಂದು ವಾಸಿಸುತ್ತಿದ್ದರು. ಕೆಲವು ತಿಂಗಳ ಬಳಿಕ ಪತಿ ಮನೆಗೆ ವಾಪಸ್ ತೆರಳಿದ್ದರು. ನ.22ರಂದು ದಂಪತಿ ಮಧ್ಯೆ ಗಲಾಟೆ ನಡೆದು ಗೌಸಿಯಾ ಅವರನ್ನು ಕೊಲೆ ಮಾಡಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಕೃತ್ಯ ಎಸಗಿದ ಬಳಿಕ ಕೆಲಸ ಮಾಡುತ್ತಿದ್ದ ವೆಲ್ಡಿಂಗ್ ಅಂಗಡಿ ಮಾಲೀಕರ ಬಳಿಯಿಂದ ಆರೋಪಿ ಹಣ ಕೇಳಿದ್ದ. ನಂತರ, ಮಗು ಜತೆಗೆ ಆರೋಪಿ ಪರಾರಿ ಆಗಿದ್ದಾನೆ’ ಎಂದು ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.