ADVERTISEMENT

ಎಸ್‌ಐ ಕೊಲೆಗೆ ಯತ್ನ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 22:56 IST
Last Updated 8 ನವೆಂಬರ್ 2020, 22:56 IST
 ಪ್ರೊಬೇಷನರಿ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸರ್ಪುದ್ದೀನ್
ಪ್ರೊಬೇಷನರಿ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸರ್ಪುದ್ದೀನ್   

ಬೆಂಗಳೂರು: ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಪ್ರೊಬೇಷನರಿ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಸರ್ಪುದ್ದೀನ್ ಎಂಬುವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಆರೋಪಿ ಉದಯ್‌ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.

‘ಭಾನುವಾರ ಮಧ್ಯಾಹ್ನ 2.15ರ ಸುಮಾರಿಗೆ ಈ ಘಟನೆ ನಡೆದಿದೆ. ಸರ್ಪುದ್ದೀನ್ ನೀಡಿರುವ ದೂರು ಆಧರಿಸಿ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರಿದಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದರು.

‘ಶ್ರೀರಾಮಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಪುದ್ದೀನ್, ಪ್ರಕರಣವೊಂದರ ತನಿಖೆಗೆ ಮಫ್ತಿಯಲ್ಲಿ ಯಶವಂತಪುರ ಎಸ್‌ಸಿ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿ ಬಳಿ ಬಂದಿದ್ದರು. ಆರೋಪಿ ತಂದೆ ನಡೆಸುತ್ತಿದ್ದ ಹೋಟೆಲ್‌ ಬಳಿ ನಿಂತಿದ್ದರು. ಆಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ, ಸರ್ಪುದ್ದೀನ್ ಅವರಿಗೆ ಗುದ್ದಿಸಿದ್ದ. ಅದನ್ನು ಪಿಎಸ್‌ಐ ಪ್ರಶ್ನಿಸಿದ್ದರು.’

ADVERTISEMENT

‘ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ ಉದಯ್‌ಕುಮಾರ್, ಪಿಎಸ್‌ಐ ಅವರನ್ನು ಎಳೆದಾಡಿ ಹಲ್ಲೆ ಮಾಡಿದ್ದ. ಕಲ್ಲಿನಿಂದ ತಲೆಗೆ ಹೊಡೆದಿದ್ದ. ತಲೆಯಿಂದ ರಕ್ತ ಸೋರಲಾರಂಭಿಸಿತ್ತು. ನಂತರ, ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು’ ಎಂದೂ ಮೀನಾ ಹೇಳಿದರು.

‘ಮಾಹಿತಿ ಬರುತ್ತಿದ್ದಂತೆ ಗಸ್ತಿನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.