ADVERTISEMENT

ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ: ಎಂಟು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 21:50 IST
Last Updated 29 ನವೆಂಬರ್ 2023, 21:50 IST
   

ಬೆಂಗಳೂರು: ಕ್ಯಾಬ್‌ಗಾಗಿ ಕಾಯುತ್ತಿದ್ದ ನೇಪಾಳದ ಯುವಕನಿಗೆ ದೊಣ್ಣೆಯಿಂದ ಥಳಿಸಿ ಕೊಲೆ ಮಾಡಿ ದರೋಡೆ ನಡೆಸಿದ್ದ ಎಂಟು ಆರೋಪಿಗಳನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಿದಿರುಕಲ್ಲು ಹಾಗೂ ಬಾಗಲಗುಂಟೆಯ ನಿವಾಸಿಗಳಾದ ಟಿ.ಚಂದ್ರು(28), ಜೀವನ್(26), ಕಾರ್ತಿಕ್(29), ಕಿರಣ್ ಕುಮಾರ್(25), ಮದನ್(24), ಮುನೇಶ್(25), ನಿಖಿಲ್(27), ಸಚಿನ್(30) ಬಂಧಿತ ಆರೋಪಿಗಳು. ಎಲ್ಲಆರೋಪಿಗಳೂ ಸ್ನೇಹಿತರು.

ಬಂಧಿತರಿಂದ 1 ಮೊಬೈಲ್, ₹ 5,200 ನಗದು, 1 ಸರಕು ಸಾಗಣೆ ವಾಹನ, 7 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ತಲೆಗೆ ಹೊಡೆದಿದ್ದ ಆರೋಪಿಗಳು’: ಆರೋಪಿಗಳು, ನ.13ರಂದು ನೇಪಾಳದ ಅನಿಲ್ ಬೊಹರ ಎಂಬಾತನನ್ನು ಕೊಲೆಗೈದು, ದರೋಡೆ ಮಾಡಿದ್ದರು. ಅನಿಲ್ ಬೊಹರ ಮತ್ತು ಸ್ನೇಹಿತರು ಶ್ರೀರಾಮಪುರದ ಗ್ಲಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಂದು ಬೆಳಿಗ್ಗೆ ಮನೆಗೆ ಹೋಗಲು ಆರ್‌ಎಂಸಿ ಯಾರ್ಡ್‌ನ 1ನೇ ಗೇಟ್ ರಸ್ತೆಯ ದೇವಸ್ಥಾನ ಎದುರು ಕ್ಯಾಬ್‌ಗೆ ಕಾಯುತ್ತಿದ್ದರು. ಬುಕ್‌ ಮಾಡಿದ್ದ ಕ್ಯಾಬ್‌ ಸ್ಥಳಕ್ಕೆ ಬರುವುದು ತುಸು ವಿಳಂಬವಾಗಿತ್ತು. ಆಗ ಕೆಟಿಎಂ ಬೈಕ್ ಹಾಗೂ ಗೂಡ್ಸ್‌ ವಾಹನದಲ್ಲಿ ಬಂದ 10 ಮಂದಿ ದೊಣ್ಣೆಯಿಂದ ಅನಿಲ್ ಬೊಹರ ತಲೆಗೆ ಹೊಡೆದಿದ್ದರು. ಆತನ ಜತೆಗಿದ್ದ ಸ್ನೇಹಿತರಿಗೂ ಹಲ್ಲೆ ನಡೆಸಿ ದರೋಡೆ ನಡೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಅನಿಲ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ.22ರಂದು ಅನಿಲ್‌ ಮೃತಪಟ್ಟಿದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ದರೋಡೆ ಜತೆಗೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’

ನ.13ರಂದು ರಾತ್ರಿ ಪಟಾಕಿ ತರಲು ಹೋಗಿದ್ದರು. ನ.14ರ ನಸುಕಿನ ವೇಳೆ ಮನೆಗೆ ವಾಪಸ್‌ ಬರುವಾಗ ಮೋಜು- ಮಸ್ತಿಗಾಗಿ ದರೋಡೆ ಮಾಡಿ ಹಣ ಸಂಪಾದಿಸಲು ನಿರ್ಧರಿಸಿದ್ದರು. ಆ ವೇಳೆ ರಸ್ತೆಯಲ್ಲಿ ಸಿಕ್ಕಿದ ಅನಿಲ್‌ಗೆ ಹಲ್ಲೆ ಮಾಡಿದ್ದರು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ಧಾರೆ. ಆರೋಪಿಗಳಾದ ಚಂದ್ರು, ಕಾರ್ತಿಕ್, ಸಚಿನ್ ವಿರುದ್ಧ ಈ ಹಿಂದೆಯೂ ಬಾಗಲಗುಂಟೆ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದವು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.