ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ಪಕ್ಷದ ಆಧಾರದಲ್ಲಿ ತನಿಖೆ ನಡೆಯದು: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 15:35 IST
Last Updated 21 ಜೂನ್ 2024, 15:35 IST
ಜಿ.ಪರಮೇಶ್ವರ
ಜಿ.ಪರಮೇಶ್ವರ    

ಬೆಂಗಳೂರು: ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆ ಪಕ್ಷದ ಆಧಾರದಲ್ಲಿ ನಡೆಯುವುದಿಲ್ಲ. ಕಾನೂನಿನ ಪ್ರಕಾರ ಪೊಲೀಸರು ತನಿಖೆ ನಡೆಸುತ್ತಾರೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ತಪ್ಪಿತಸ್ಥರು ಯಾವ ರಾಜಕೀಯ ಪಕ್ಷದಲ್ಲಿದ್ದರು ಎಂಬುದನ್ನು ಆಧರಿಸಿ ತನಿಖೆಯ ನಡೆ ನಿರ್ಧಾರ ಆಗುವುದಿಲ್ಲ. ತಪ್ಪು ಮಾಡಿದವರು ಯಾವುದೇ ಪಕ್ಷದಲ್ಲಿದ್ದರೂ ತಪ್ಪಿತಸ್ಥರೇ ಆಗಿರುತ್ತಾರೆ. ತನಿಖೆಯಲ್ಲಿ ಪಕ್ಷ ಮುಖ್ಯ ಆಗುವುದಿಲ್ಲ. ಏನು ತಪ್ಪು ಮಾಡಿದ್ದಾರೆ ಎಂಬುದರ ಆಧಾರದಲ್ಲಿ ತನಿಖೆ ಮುಂದುವರಿಯುತ್ತದೆ’ ಎಂದರು.

‘ನಟ ದರ್ಶನ್ ರಕ್ಷಣೆಗೆ ಪ್ರಭಾವ ಬೀರಲು ನನ್ನ ಬಳಿ ಬರಬೇಡಿ ಎಂದು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ‌’ ಎಂಬುದನ್ನು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಅಧಿಕಾರಿಗಳು ಮಾಹಿತಿ ನೀಡಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡುತ್ತಾರೆ. ಅದನ್ನು ಹೊರತುಪಡಿಸಿ, ಯಾರೂ ಹೋಗುವುದಿಲ್ಲ. ಅದರ ಅವಶ್ಯಕತೆಯೂ ಯಾರಿಗೂ ಇಲ್ಲ. ದರ್ಶನ್‌ ವಿಷಯದಲ್ಲಿ ಯಾರೂ ನನ್ನ ಬಳಿ ಬಂದಿಲ್ಲ’ ಎಂದರು.

ADVERTISEMENT

ನೋಟಿಸ್‌ ನೀಡಲಾಗಿದೆ:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ‘ಎಕ್ಸ್‌’ ಖಾತೆಯಲ್ಲಿ ಕೀಳು ಅಭಿರುಚಿಯ ಪೋಸ್ಟ್‌ ಹಾಕಿದ್ದ ವ್ಯಕ್ತಿಗೆ ನೋಟಿಸ್‌ ನೀಡಲು ತೆರಳಿದ್ದ ಹೈಗ್ರೌಂಡ್ಸ್‌ ಠಾಣೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ನಮ್ಮ ಪೊಲೀಸರು ಸ್ಥಳೀಯ ಪೊಲೀಸರಿಗೆ ತಿಳಿಸದೇ ಉತ್ತರಪ್ರದೇಶದ ನೊಯ್ಡಾದಲ್ಲಿ ಕಾರ್ಯಾಚರಣೆ ನಡೆಸಿದಾಗ ಆ ರೀತಿ ನಡೆದಿದೆ. ನಂತರ ಸ್ಥಳೀಯ ಪೊಲೀಸರ ನೆರವು ಪಡೆದು ಆ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ’ ಎಂದು ತಿಳಿಸಿದರು.

‘ನಿರೀಕ್ಷೆ ಜಾಸ್ತಿ ಇತ್ತು’

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳನ್ನಾದರೂ ಗೆಲ್ಲಬಹುದು ಎಂಬ ನಿರೀಕ್ಷೆ ಪಕ್ಷದ ಹೈಕಮಾಂಡ್‌ಗೆ ಇತ್ತು’ ಎಂದು ಪರಮೇಶ್ವರ ಹೇಳಿದರು. ಚುನಾವಣೆಯಲ್ಲಿನ ಹಿನ್ನಡೆ ಕುರಿತು ಪರಿಶೀಲನೆಗೆ ಎಐಸಿಸಿ ಸಮಿತಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು ‘ಹೈಕಮಾಂಡ್‌ಗೆ ಹೆಚ್ಚು ನಿರೀಕ್ಷೆ ಇತ್ತು. 15 ಸ್ಥಾನ ಗೆಲ್ಲುವುದಾಗಿ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದರು. ನಮ್ಮ ಪಕ್ಷದ ನೇತೃತ್ವದ ಸರ್ಕಾರ ಇದ್ದರೂ ಏಕೆ ಹಿನ್ನಡೆ ಆಯಿತು ಎಂಬುದು ಸಮಿತಿಯ ವರದಿಯಿಂದ ಗೊತ್ತಾಗಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.