ಬೆಂಗಳೂರು: ತಿಲಕ್‌ನಗರ ಠಾಣೆ ವ್ಯಾಪ್ತಿಯ ಶಬನಮ್ ಡೆವಲಪರ್ಸ್ ಕಚೇರಿ ಮೇಲೆ ದಾಳಿ ನಡೆಸಿ ಇಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣ ಸಂಬಂಧ ಭೂಗತ ಪಾತಕಿ ರವಿ ಪೂಜಾರಿಯ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಉತ್ತರ ಪ್ರದೇಶದ ಮುಜಾಫರ್ ನಗರದ ಇಕ್ಬಾಲ್ ಖುರೇಷಿ ಬಂಧಿತ. ಈತ ಅಕ್ರಮವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ. ರವಿ ಪೂಜಾರಿ ಜೊತೆ ಒಡನಾಟವಿಟ್ಟುಕೊಂಡಿದ್ದ. ಈ ಸಂಬಂಧ ಆತನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘2007ರಲ್ಲಿ ಶಬನಮ್ ಡೆವಲಪರ್ಸ್ ಕಚೇರಿ ಮೇಲೆ ದಾಳಿ ಮಾಡಿದ್ದ ಮುಸುಕುಧಾರಿಗಳು, ಕಚೇರಿ ಉದ್ಯೋಗಿ ಹಾಗೂ ಕಾರು ಚಾಲಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು’ ಎಂದರು.
‘ಸೆನೆಗಲ್‌ನಲ್ಲಿ ಸೆರೆ ಹಿಡಿಯಲಾದ ರವಿ ಪೂಜಾರಿ, ಹಲವು ಮಾಹಿತಿ ಬಾಯ್ಬಿಟ್ಟಿದ್ದಾನೆ. ಅದರ ಆಧಾರದಲ್ಲಿ ಆರೋಪಿಗಳನ್ನು ಸೆರೆ ಹಿಡಿಯಲಾಗುತ್ತಿದೆ. 2007ರಲ್ಲಿ ಇಕ್ಬಾಲ್ ಖುರೇಷಿಯನ್ನು ಬಂಧಿಸಲಾಗಿತ್ತು. ನಂತರ, ಜಾಮೀನು ಮೇಲೆ ಹೊರಬಂದಿದ್ದ ಆತ ತಲೆಮರೆಸಿಕೊಂಡಿದ್ದ. 13 ವರ್ಷಗಳ ನಂತರ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.