ADVERTISEMENT

ಜೋಡಿ ಕೊಲೆ: ಚಿನ್ನ, ನಗದು ದರೋಡೆ

ಉದ್ಯಮಿ ಮನೆಯಲ್ಲಿ ಕೃತ್ಯ l ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 22:30 IST
Last Updated 18 ಡಿಸೆಂಬರ್ 2022, 22:30 IST
   

ಬೆಂಗಳೂರು: ಕೋರಮಂಗಲ 2ನೇ ಹಂತದ ನಿವಾಸಿ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಗಾರ ಕರಿಯಪ್ಪ (45), ಭದ್ರತಾ ಸಿಬ್ಬಂದಿ ಬಹದ್ದೂರ್ (28) ಅವರನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಚಿನ್ನಾಭರಣ, ನಗದು ಕದ್ದೊಯ್ದಿದ್ದಾರೆ.

‘ಉದ್ಯಮಿ ರಾಜಗೋಪಾಲ್ ರೆಡ್ಡಿ ಅವರ ಮನೆಯಲ್ಲಿ ಶನಿವಾರ ರಾತ್ರಿ ಕೃತ್ಯ ನಡೆದಿದೆ. ದುಷ್ಕರ್ಮಿಗಳು, ಸುಮಾರು ₹ 5 ಲಕ್ಷ ನಗದು, ಅಪಾರ ಪ್ರಮಾಣದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾವಣಗೆರೆಯ ಕರಿಯಪ್ಪ, 30 ವರ್ಷಗಳಿಂದ ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಸ್ಸಾಂನ ಬಹದ್ದೂರ್, ಎರಡು ವರ್ಷಗಳ ಹಿಂದೆಯಷ್ಟೇ ಭದ್ರತಾ ಸಿಬ್ಬಂದಿ ಕೆಲಸಕ್ಕೆ ಸೇರಿದ್ದರು’ ಎಂದು ಹೇಳಿದರು.

ADVERTISEMENT

ಬೇರೆಡೆ ಹೋಗಿದ್ದ ಕುಟುಂಬ: ‘ಉದ್ಯಮಿ ರಾಜಗೋಪಾಲ್, ಕುಟುಂಬದವರ ಜೊತೆ ಇತ್ತೀಚೆಗೆ ಬೇರೆ ಊರಿಗೆ ಹೋಗಿದ್ದರು. ಮನೆ ನೋಡಿಕೊಳ್ಳಲೆಂದು ಕರಿಯಪ್ಪ ಹಾಗೂ ಬಹದ್ದೂರ್ ಅವರಿಗೆ ಹೇಳಿದ್ದರು. ಕರಿಯಪ್ಪ ಮನೆಯಲ್ಲಿದ್ದರು. ಬಹದ್ದೂರ್, ಹೊರಗೆ ಕಾವಲು ಕಾಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಮನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ದುಷ್ಕರ್ಮಿಗಳು ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ. ಆರೋಪಿಗಳ ಬಗ್ಗೆ ಕೆಲ ಸುಳಿವು ಸಿಕ್ಕಿವೆ. ಅದನ್ನು ಆಧರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಸಂಪ್‌ನಲ್ಲಿ ಮೃತದೇಹ: ‘ಉದ್ಯಮಿ ಕುಟುಂಬ ಇಲ್ಲದ್ದನ್ನು ಗಮನಿಸಿದ್ದ ದುಷ್ಕರ್ಮಿಗಳು, ಶನಿವಾರ ರಾತ್ರಿ ಮನೆ ಬಳಿ ಬಂದಿದ್ದರು. ಹೊರಗಿದ್ದ ಭದ್ರತಾ ಸಿಬ್ಬಂದಿ ಬಹದ್ದೂರ್‌ ಮೇಲೆ ದಾಳಿ ಮಾಡಿ, ಬಾಯಿಗೆ ಬಟ್ಟೆ ತುರುಕಿ ಹಾಗೂಹಗ್ಗದಿಂದ ಕೈ–ಕಾಲು ಕಟ್ಟಿದ್ದರು. ನಂತರ, ಬಹದ್ದೂರ್‌ ಅವರನ್ನು ನೀರಿನ ಸಂಪ್‌ಗೆ ಎಸೆದು ಮುಚ್ಚಳ ಮುಚ್ಚಿರುವುದು ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ನೀರಿನ ಸಂಪ್‌ನಲ್ಲಿಯೇ ಬಹದ್ದೂರ್ ಮೃತಪಟ್ಟಿದ್ದು, ಮೃತದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎನ್ನಲಾಗಿದೆ.ಮನೆಯೊಳಗೆ ಕೊಲೆ: ‘ಬಹದ್ದೂರ್ ಅವರನ್ನು ಸಂಪ್‌ಗೆ ಎಸೆದ ನಂತರ ಆರೋಪಿಗಳು, ಮನೆಗೆ ನುಗ್ಗಿದ್ದರು. ಕೊಠಡಿಯಲ್ಲಿ ಮಲಗಿದ್ದ ಕರಿಯಪ್ಪ ಅವ
ರನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ. ನಂತರ, ಮನೆಯಲ್ಲಿ ಹುಡುಕಾಡಿ ಆಭರಣ, ನಗದು ದೋಚಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರ ಬೆಳಿಗ್ಗೆ ಮನೆ ಸ್ವಚ್ಛತೆ ಬಂದಿದ್ದ ಕೆಲಸಗಾರರು, ಕರಿಯಪ್ಪ ಶವ ಕಂಡು ಠಾಣೆಗೆ ಮಾಹಿತಿ ನೀಡಿದ್ದರು. ಶ್ವಾನದಳ, ಬೆರಳಚ್ಚು ತಜ್ಞರ ಸಮೇತ ಸ್ಥಳದಲ್ಲಿ ಪರಿಶೀಲಿಸಲಾಗಿದೆ. ಉದ್ಯಮಿಯ ದೂರು ನೀಡಿದ್ದಾರೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ತಂಡವೇ ಕೃತ್ಯ ಎಸಗಿರುವ ಶಂಕೆ ಇದೆ’ ಎಂಬುದಾಗಿಯೂ ಪೊಲೀಸ್‌ ಮೂಲಗಳು ತಿಳಿಸಿವೆ.

‘ಬಹದ್ದೂರ್ ಮೇಲೆ ವ್ಯಕ್ತವಾಗಿದ್ದ ಶಂಕೆ’

‘ಆರಂಭದಲ್ಲಿ ಕರಿಯಪ್ಪ ಮೃತದೇಹ ಮಾತ್ರ ಮನೆಯೊಳಗೆ ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಬಹದ್ದೂರ್ ಎಲ್ಲಿದ್ದಾರೆಂಬ ಮಾಹಿತಿ ಇರಲಿಲ್ಲ. ಹೀಗಾಗಿ, ಅವರೇ ಕೊಲೆ ಮಾಡಿರಬಹುದೆಂಬ ಅನುಮಾನ ದಟ್ಟವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಸಂಜೆಯವರೆಗೂ ಮನೆಯಲ್ಲೆಲ್ಲ ಹುಡುಕಾಟ ನಡೆಸಿದರೂ ಬಹದ್ದೂರ್ ಸುಳಿವು ಸಿಕ್ಕಿರಲಿಲ್ಲ. ಸಂಜೆ ನೀರಿನ ಸಂಪ್‌ ಪರಿಶೀಲಿಸಿದಾಗ ಬಹದ್ದೂರ್ ಮೃತದೇಹ ಕಂಡಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.