ADVERTISEMENT

ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ಬೈಕ್ ಸವಾರನ ಕೊಲೆ

ಬ್ಯಾಂಕ್‌ ವ್ಯವಸ್ಥಾಪಕ, ಸಿವಿಲ್‌ ಎಂಜಿನಿಯರ್‌ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 14:38 IST
Last Updated 22 ಆಗಸ್ಟ್ 2024, 14:38 IST
ಕೊಲೆಯಾದ ಮಹೇಶ್‌ 
ಕೊಲೆಯಾದ ಮಹೇಶ್‌    

ಬೆಂಗಳೂರು: ಮುಂದಕ್ಕೆ ಸಾಗಲು ರಸ್ತೆ ಬಿಡದ ವಿಚಾರಕ್ಕೆ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ಸವಾರನನ್ನು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಚಾಮುಂಡೇಶ್ವರಿ ಬಡಾವಣೆ ನಿವಾಸಿ ಮಹೇಶ್‌ (21) ಕೊಲೆಯಾದ ಯುವಕ.

ಕೊಲೆ ಮಾಡಿದ ಆರೋಪದ ಅಡಿ  ಬ್ಯಾಂಕ್‌ವೊಂದರ ಬೆಳ್ಳಂದೂರು ಶಾಖೆಯ ವ್ಯವಸ್ಥಾಪಕ ಅರವಿಂದ ಹಾಗೂ ಸಿವಿಲ್‌ ಎಂಜಿನಿಯರ್ ಚನ್ನಕೇಶವ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಕೊಡಿಗೆಹಳ್ಳಿಯ ನಿವಾಸಿಗಳು.

ADVERTISEMENT

‘ಕೋಲಾರ ಜಿಲ್ಲೆ ಕೆಜಿಎಫ್‌ನ ಮಹೇಶ್‌ ಅವರು ಕೆಲವು ವರ್ಷಗಳ ಹಿಂದೆ ಪೋಷಕರೊಂದಿಗೆ ಬೆಂಗಳೂರಿಗೆ ಬಂದು ಚಾಮುಂಡೇಶ್ವರಿ ಬಡಾವಣೆಯಲ್ಲಿ ನೆಲೆಸಿದ್ದರು. ಪೋಷಕರು ಕೂಲಿ ಕೆಲಸ ಮಾಡುತ್ತಿದ್ದಾರೆ. ಮಹೇಶ್ ಅವರು ಬಿ.ಕಾಂ ವ್ಯಾಸಂಗ ಮಾಡಿದ್ದರು. ನಂತರ, ವಿದ್ಯಾಭ್ಯಾಸ ಮುಂದುವರಿಸದೆ ಆಹಾರ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದರು. ಬುಧವಾರ ರಾತ್ರಿ ತಮ್ಮ ಸ್ನೇಹಿತರಾದ ನಿಖಿಲ್ ಹಾಗೂ ಬಾಲಾಜಿ ಅವರೊಂದಿಗೆ ವಿದ್ಯಾರಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸುವ ಮಾರ್ಗದಲ್ಲಿದ್ದ ಅಂಗಡಿಗೆ ತೆರಳಿ ಟೀ ಕುಡಿದು ಒಂದೇ ಬೈಕ್‌ನಲ್ಲಿ ಮೂವರು ವಾಪಸ್ ಬರುತ್ತಿದ್ದರು. ಅದೇ ಮಾರ್ಗದಲ್ಲಿ ಆರೋಪಿಗಳು ಕಾರಿನಲ್ಲಿ ಬರುತ್ತಿದ್ದರು. ಮುಂದಕ್ಕೆ ಸಾಗಲು ಕಾರಿಗೆ ದಾರಿ ಬಿಡುವಂತೆ ಹಾರ್ನ್‌ ಮಾಡಿದ್ದರೂ ಮಹೇಶ್‌ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದರು. ಸ್ವಲ್ಪ ದೂರ ಸಾಗಿದ ಮೇಲೆ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಲಾಗಿದೆ. ಆಗ ಹಿಂದಿದ್ದ ನಿಖಿಲ್‌ ಬೈಕ್‌ನಿಂದ ಜಿಗಿದು ಪಾರಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಬೈಕ್‌ 300 ಮೀಟರ್‌ನಷ್ಟು ದೂರ ಸಾಗಿದ ಮೇಲೆ ಕಾರು ಹಿಂಬಾಲಿಸುತ್ತಿರುವುದನ್ನು ಕಂಡ ಬಾಲಾಜಿ ಅವರೂ ಜಿಗಿದು ಪ್ರಾಣ ಉಳಿಸಿಕೊಂಡಿದ್ದರು. ಬಳಿಕ ಬೈಕ್‌ ನಿಲ್ಲಿಸುವಂತೆ ಆರೋಪಿ ಅರವಿಂದ್‌ ಮನವಿ ಮಾಡಿದ್ದರು. ಅದಕ್ಕೆ ಕಿವಿಗೊಡದೇ ಸವಾರ ಮುಂದಕ್ಕೆ ಸಾಗಿದ್ದರು. ಕೋಪಗೊಂಡ ಅರವಿಂದ್‌ ಕಾರಿನಲ್ಲಿ ಹಿಂಬಾಲಿಸಿದ್ದರು. ಗಾಬರಿಗೊಂಡ ಮಹೇಶ್ ಅವರು ಬೈಕ್‌ ಅನ್ನು ಸಪ್ತಗಿರಿ ಬಡಾವಣೆ ಕಡೆಗೆ ತಿರುಗಿಸಿದ್ದರು. ಆಗ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿದ ಪರಿಣಾಮ ಅವರು ಬೈಕ್‌ ಸಹಿತ ಕಾಂಪೌಂಡ್‌ಗೆ ಡಿಕ್ಕಿಯಾಗಿ ಉರುಳಿ ಬಿದ್ದಿದ್ದರು. ಹೆಲ್ಮೆಟ್‌ ಧರಿಸಿರಲಿಲ್ಲ. ತಲೆಗೆ ಗಂಭೀರವಾದ ಗಾಯವಾಗಿತ್ತು. ಕಾರಿನಲ್ಲಿದ್ದ ಚನ್ನಕೇಶವ ಅವರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಮಹೇಶ್ ಮೃತಪಟ್ಟಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ:‌

‘ಕಾರು ಹಿಂಬಾಲಿಸುತ್ತಿರುವುದು ಹಾಗೂ ಡಿಕ್ಕಿ ಹೊಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರಂಭದಲ್ಲಿ ಅಪಘಾತ ಪ್ರಕರಣ ಎಂದು ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು. ನಂತರ, ಕೊಲೆ ಪ್ರಕರಣ ಎಂದು ಗೊತ್ತಾದ ಬಳಿಕ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬುಧವಾರ ರಾತ್ರಿಯೇ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಅರವಿಂದ್‌ 
ಚನ್ನಕೇಶವ 

Cut-off box - ಪೋಷಕರ ಕಣ್ಣೀರು  ಗುರುವಾರ ಬೆಳಿಗ್ಗೆ ವಿದ್ಯಾರಣ್ಯಪುರ ಠಾಣೆಗೆ ಬಂದಿದ್ದ ಪೋಷಕರು ಕಣ್ಣೀರು ಸುರಿಸಿದರು. ‘ಮಗನನ್ನು ಕಷ್ಟಪಟ್ಟು ಸಾಕಿದ್ದೆವು. ದಾರಿ ಬಿಡದ ಸಣ್ಣ ವಿಚಾರಕ್ಕೆ ಮಗನನ್ನೇ ಕೊಲೆ ಮಾಡಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು. ನಗರದಲ್ಲಿ ಇತ್ತೀಚೆಗೆ ರಸ್ತೆಯಲ್ಲಿ ವಾಹನಕ್ಕೆ ಮತ್ತೊಂದು ವಾಹನ ತಾಗಿದ ವಿಚಾರಕ್ಕೆ ಹಲ್ಲೆ ನಡೆಸುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಒಂದು ವಾರದಲ್ಲಿ ಈ ರೀತಿ ನಾಲ್ಕು ಪ್ರಕರಣಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.