ADVERTISEMENT

ಸಂಗೀತಕ್ಕಿದೆ ಕಾಯಿಲೆ ವಾಸಿಯ ಶಕ್ತಿ: ಡಾ.ಸಿ.ಎನ್. ಮಂಜುನಾಥ್

ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಡಾ.ಸಿ.ಎನ್. ಮಂಜುನಾಥ್ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 19:46 IST
Last Updated 8 ಜುಲೈ 2024, 19:46 IST
‌ಡಾ.ಸಿ.ಎನ್ ಮಂಜುನಾಥ್
‌ಡಾ.ಸಿ.ಎನ್ ಮಂಜುನಾಥ್   

ಬೆಂಗಳೂರು: ‘ಸಂಗೀತವು ದೇವರು ನೀಡಿದ ಅದ್ಭುತ ಕೊಡುಗೆ. ಇದಕ್ಕೆ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯಿದೆ’ ಎಂದು ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು. 

ವಿಜಯ ಮ್ಯೂಸಿಕ್ ಸ್ಕೂಲ್ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಸಪ್ತಸ್ವರ ಸಂಗೀತ ಸಂಜೆ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಮನೋವೈದ್ಯಕೀಯ ಕ್ಷೇತ್ರದಲ್ಲಿ ‘ಮ್ಯೂಸಿಕ್ ಥೆರಪಿ’ ನೀಡಲಾಗುತ್ತಿದೆ. ಸಂಗೀತದಿಂದ ಆತಂಕ, ಒತ್ತಡ ದೂರವಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಸಂಗೀತಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೆರಿಗೆ ವಾರ್ಡ್, ಎಂಆರ್‌ಐ ಘಟಕ ಸೇರಿ ವಿವಿಧೆಡೆ ನೋವನ್ನು ಮರೆಯಲು ಸುಮಧುರ ಸಂಗೀತ ಹಾಕಲಾಗುತ್ತಿದೆ. ಸಂಗೀತ ಕಲಿತರೆ ಇಡೀ ವಿಶ್ವದ ಭಾಷೆ ಕಲಿತಂತೆ. ನಮ್ಮ ಭಾವನೆಯನ್ನು ವ್ಯಕ್ತಪಡಿಸಲು ಸಂಗೀತ ಸಹಕಾರಿಯಾಗಿದೆ’ ಎಂದು ಹೇಳಿದರು. 

ADVERTISEMENT

‘ಆಧುನಿಕ ಕಾಲಘಟ್ಟದಲ್ಲಿ ಸಂಗೀತದಲ್ಲಿಯೂ ಮಾರ್ಪಾಡಾಗಿದೆ. ಮೊದಲು ಸಮಾಜವನ್ನು ತಿದ್ದುವಂತಹ ಗೀತೆಗಳು ಬರುತ್ತಿದ್ದವು. ಆದರೆ, ಸಂಗೀತದ ಆರ್ಭಟದಲ್ಲಿ ಸಾಹಿತ್ಯ ಹಿನ್ನೆಲೆಗೆ ಸರಿದಿದೆ. ಈಗಿನ ಕಾಲದ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದೆ. ಅವರಲ್ಲಿನ ಈ ಗೀಳನ್ನು ಹೋಗಲಾಡಿಸಿ, ಸಂಗೀತದ ಕಡೆ ಆಸಕ್ತಿ ಹೆಚ್ಚಿಸಬೇಕು’ ಎಂದು ತಿಳಿಸಿದರು. 

ವಿಜಯ ಮ್ಯೂಸಿಕ್ ಸ್ಕೂಲ್‌ನ ನಿರ್ದೇಶಕ ಪ್ರಸನ್ನಕುಮಾರ್, ಅಧ್ಯಕ್ಷೆ ಜಯಲಕ್ಷ್ಮಿ ನಾಗೇಂದ್ರ ಉಪಸ್ಥಿತರಿಸಿದ್ದರು. ಬಳಿಕ ಕನ್ನಡದ ಜನಪ್ರಿಯ ಹಳೆಯ ಚಿತ್ರಗೀತೆಗಳ ಗಾಯನ ನಡೆಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.