ADVERTISEMENT

ಮಂತ್ರಾಲಯದಲ್ಲಿ ಅತಿಥಿ ಗೃಹದ ಕಳಪೆ ಕಾಮಗಾರಿ ಆರೋಪ: ಲೋಕಾಯುಕ್ತ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 21:31 IST
Last Updated 18 ಜೂನ್ 2024, 21:31 IST
<div class="paragraphs"><p>ಲೋಕಾಯುಕ್ತ</p></div>

ಲೋಕಾಯುಕ್ತ

   

ಬೆಂಗಳೂರು: ಮಂತ್ರಾಲಯದಲ್ಲಿ ಕರ್ನಾಟಕ ಛತ್ರದ ಆವರಣದಲ್ಲಿ ₹5 ಕೋಟಿ ವೆಚ್ಚದಲ್ಲಿ 100 ಕೊಠಡಿಗಳ ಅತಿಥಿ ಗೃಹ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿರುವ ಆರೋಪದ ಕುರಿತು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕಂದಾಯ ಇಲಾಖೆ (ಮುಜರಾಯಿ) ಪ್ರಧಾನ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.

2011ರಲ್ಲಿ ಟೆಂಡರ್‌ ಪ್ರಕ್ರಿಯೆ ಅಂತಿಮಗೊಳಿಸಿ, 2019ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಿ, ಹಸ್ತಾಂತರಿಸಲಾಗಿತ್ತು. ಈ ಕಟ್ಟಡ ಗೋಡೆಗಳಲ್ಲಿ ಬಿರುಕು ಮೂಡಿರುವುದು, ನೀರು ಸೋರಿಕೆ, ಕಿಟಕಿ, ಬಾಗಿಲು, ನೆಲಕ್ಕೆ ಹಾಸಿದ ಟೈಲ್ಸ್‌ಗಳಿಗೆ ಹಾನಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಅತಿಥಿ ಗೃಹ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಸಾರ್ವಜನಿಕರು ಟೀಕಿಸಿದ್ದರು.

ADVERTISEMENT

ಈ ಕುರಿತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಟಿಪ್ಪಣಿ ಹೊರಡಿಸಿರುವ ಸಚಿವರು, ‘₹5 ಕೋಟಿ ವೆಚ್ಚ ಮಾಡಿ ಅತಿಥಿ ಗೃಹ ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗಿದೆ. ಭಕ್ತಾದಿಗಳಿಗೂ ಅನಾನುಕೂಲಕ್ಕೆ ಕಾರಣವಾಗಿದೆ’ ಎಂದಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಿ, ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಬೇಕು ಎಂದು ರೆಡ್ಡಿ ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.