ಬೆಂಗಳೂರು: ‘ನಮ್ಮ ನಿಮ್ಮ(ಹಿಂದು–ಮುಸ್ಲಿಂ) ಡಿಎನ್‌ಎ ಒಂದೇ. ರಕ್ತವೂ ಒಂದೇ. ಹಿಂದು, ಮುಸ್ಲಿಂ, ಕ್ರೈಸ್ತರು ಅಣ್ಣ– ತಮ್ಮಂದಿರಂತೆ ಇರೋಣ, ಒಗ್ಗಟ್ಟಿನಿಂದ ವಿಶ್ವದಲ್ಲಿ ಭಾರತ ನಂಬರ್ 1 ಆಗುವಂತೆ ನೋಡಿಕೊಳ್ಳೋಣ’ ಎಂದು ಕಾಂಗ್ರೆಸ್‌ನ ಎನ್.ಎ.ಹ್ಯಾರಿಸ್ ಹೇಳಿದರು.
ವಿಧಾನಸಭೆಯಲ್ಲಿ ಶುಕ್ರವಾರ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಜಾಬ್ ವಿವಾದ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಘಟನೆಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು. ‘ಇಲ್ಲಿ ತನಕ ಆಗಿದ್ದು ಸಾಕು. ಇನ್ನು ನಿಲ್ಲಿಸೋಣ. ನಾವ್ಯಾರೂ ಸಾವಿರಾರು ವರ್ಷ ಇರುವುದಿಲ್ಲ. ಮೂರು ದಿನಗಳ ಬದುಕಿಗೆ ಇಷ್ಟೆಲ್ಲಾ ಕಿತ್ತಾಡಬೇಕೆ’ ಎಂದು ಅವರು ಪ್ರಶ್ನಿಸಿದರು.
‘ನಾವೆಲ್ಲ ಅಣ್ಣ ತಮ್ಮಂದಿರು. ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ಹಿಂದು–ಮುಸ್ಲಿಂ ಎಂದು ಕಿತ್ತಾಡುವುದನ್ನು ನಿಲ್ಲಿಸೋಣ. ಎರಡೂ ಸಮುದಾಯಗಳ ಹಿರಿಯರು ಕುಳಿತು ಮಾತನಾಡಿ, ಶಾಂತಿ– ಸೌಹಾರ್ದದಿಂದ ಇರೋಣ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದು–ಮುಸ್ಲಿಂ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ಒಗ್ಗಟ್ಟಿನಿಂದ ಹೋರಾಟ ಮಾಡಿದ್ದರು. ಆ ಒಗ್ಗಟ್ಟು ಮರು ಸ್ಥಾಪಿಸುವ ಬಗ್ಗೆ ಸಮಾನರಾಗಿ ಬದುಕಲು ಶ್ರಮಿಸೋಣ’ ಎಂದು ಹ್ಯಾರಿಸ್ ಸಲಹೆ ನೀಡಿದರು.
ಎಪಿಎಲ್‌ನವರಿಗೂ ಉಚಿತವಾಗಿ ಸಿಗಲಿ: ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವ ಮಾದರಿಯಲ್ಲಿ ಎಪಿಎಲ್ ಕಾರ್ಡ್ ಹೊಂದಿದವರಿಗೂ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಬೇಕು. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಇತ್ತೀಚಿನ ಕೋವಿಡ್‌ನಿಂದ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಡವರಾಗಿ ದ್ದಾರೆ. ಸಾಲ ಮಾಡಿ ಚಿಕಿತ್ಸೆಗೆ ಹಣ ಭರಿಸುವ ಸ್ಥಿತಿ ಇದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಆರಂಭಿಸಲು ಉದ್ದೇಶಿಸಿರುವ ನಮ್ಮ ಕ್ಲಿನಿಕ್‌ನಲ್ಲಿ ಸಣ್ಣ–ಪುಟ್ಟ ಅನಾರೋಗ್ಯದ ಜತೆ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.