ADVERTISEMENT

ನಾಡಪ್ರಭು ಕೆಂಪೇಗೌಡ ಬಡಾವಣೆ | 193 ಎಕರೆ ಸ್ವಾಧೀನ: ಹೊಸ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 23:47 IST
Last Updated 27 ಅಕ್ಟೋಬರ್ 2023, 23:47 IST
ಕೆಂಪೇಗೌಡ ಬಡಾವಣೆಯಲ್ಲಿ ಇರುವ ಸರ್ಕಾರಿ ಜಮೀನು (ಗುರುತು ಹಾಕಿರುವುದು).
ಕೆಂಪೇಗೌಡ ಬಡಾವಣೆಯಲ್ಲಿ ಇರುವ ಸರ್ಕಾರಿ ಜಮೀನು (ಗುರುತು ಹಾಕಿರುವುದು).   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಕಾಮಗಾರಿ ಆರಂಭಗೊಂಡು 13 ವರ್ಷಗಳ ಬಳಿಕ ಸರ್ಕಾರಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಪ್ರಕರಣವು ಸುಖ್ಯಾಂತ ಕಾಣುವ ನಿರೀಕ್ಷೆಯಿದೆ. ಸರ್ವೆ ನಡೆಸಿ ಸರ್ಕಾರಿ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಬಿಡಿಎ ನಿರ್ಧರಿಸಿದ್ದು, ನಿವೇಶನ ಖರೀದಿದಾರರಲ್ಲಿ ಹೊಸ ಭರವಸೆ ಮೂಡಿದೆ. 

ಬೆಂಗಳೂರು ಸುತ್ತಮುತ್ತ ಖಾಸಗಿಯವರು ಹಲವು ಸೌಲಭ್ಯವುಳ್ಳ ಬಡಾವಣೆ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ. ಆ ನಿವೇಶನಗಳಿಗೂ ಬೇಡಿಕೆ ಇದೆ. ಆದರೆ, ಬಿಡಿಎ ನಿರ್ಮಿಸಿದ್ದ ಬಡಾವಣೆಯಲ್ಲೇ ನಿವೇಶನ ಖರೀದಿಸಿದ್ದವರು ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಸಂಕಟ ಪಡುವಂತಾಗಿದೆ. ಅರೆಬರೆ ಕಾಮಗಾರಿಯಿಂದ ಇಡೀ ಬಡಾವಣೆ ಸೊರಗಿದೆ; ಸಮಸ್ಯೆ ಸುಳಿಯಲ್ಲಿ ಸಿಲುಕಿದೆ. ಜತೆಗೆ, ಭೂಮಿ ಕಳೆದುಕೊಂಡಿರುವ ರೈತರಿಗೂ ಪರಿಹಾರ ಲಭಿಸಿಲ್ಲ.

2010ರಲ್ಲಿ ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಮುಂದಾಗಿತ್ತು. ಇದಕ್ಕಾಗಿ 4,043 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಗುರುತಿಸಿದ್ದ ಸ್ಥಳದ ಅಲ್ಲಲ್ಲಿ ಇದ್ದ ಸರ್ಕಾರಿ ಜಮೀನನ್ನು ಇದುವರೆಗೂ ಸ್ವಾಧೀನ ಪಡಿಸಿಕೊಳ್ಳಲು ಸಾಧ್ಯವಾಗದೇ ಸಮಗ್ರ ಬಡಾವಣೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಬಿಡಿಎ ಹಾಗೂ ಸರ್ಕಾರದ ನಡುವೆ ಪತ್ರ ವ್ಯವಹಾರ ನಡೆದಿದ್ದರೂ ಸಮಸ್ಯೆ ಇತ್ಯರ್ಥ ಕಂಡಿರಲಿಲ್ಲ.

ADVERTISEMENT

ಬಿಡಿಎ ಆಯುಕ್ತರ ಸೂಚನೆ ಮೇರೆಗೆ ಬಿಡಿಎ ಸರ್ವೆ ವಿಭಾಗದ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಸರ್ಕಾರಿ ಭೂಮಿಯನ್ನು ಲೇಔಟ್‌ ನಿರ್ಮಾಣಕ್ಕೆ ಬಳಸಿಕೊಳ್ಳಲು ಹೆಜ್ಜೆ ಇಡಲಾಗಿದೆ. ಜಮೀನಿನ ಮಾರುಕಟ್ಟೆ ದರ ಇನ್ನಷ್ಟೇ ನಿರ್ಧಾರ ಆಗಬೇಕಿದೆ (ಸರ್ಕಾರಕ್ಕೆ ಪಾವತಿಸುವ ಹಣ) ಎಂದು ಮೂಲಗಳು ತಿಳಿಸಿವೆ.

ಸರ್ಕಾರಿ ಜಮೀನು ಹಸ್ತಾಂತರವಾಗದೇ ಬಡಾವಣೆ ಹಲವು ಭಾಗಕ್ಕೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿರಲಿಲ್ಲ. ಬೆಂಗಳೂರು ಉತ್ತರ ತಾಲ್ಲೂಕಿನ ನಾಲ್ಕು ಗ್ರಾಮಗಳಾದ ಸೀಗೆಹಳ್ಳಿ, ಕನ್ನಲ್ಲಿ, ಕೊಡಿಗೇಹಳ್ಳಿ, ಮಂಗನಹಳ್ಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ 8 ಗ್ರಾಮಗಳಾದ ಕೊಮ್ಮಘಟ್ಟ, ಭೀಮನಕುಪ್ಪೆ, ರಾಮಸಾಗರ ಸೂಲಿಕೆರೆ, ಕೆಂಚನಪುರ, ರಾಮಸಂದ್ರ, ಕೊಮ್ಮಘಟ್ಟ ಕೃಷ್ಣಸಾಗರ, ಚಲ್ಲಘಟ್ಟ ಗ್ರಾಮಗಳಲ್ಲಿ 4,043 ಎಕರೆ 27 ಗುಂಟೆಯಲ್ಲಿ ಬಡಾವಣೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈಗ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ 193 ಎಕರೆ ಸರ್ಕಾರಿ ಜಮೀನು ಭೀಮನಕುಪ್ಪೆ, ಚಲ್ಲಘಟ್ಟ, ರಾಮಸಂದ್ರ ಭಾಗದಲ್ಲಿದೆ. ಈ ಭೂಮಿ ಹಸ್ತಾಂತರವಾದರೆ ಕಾಮಗಾರಿ ಸ್ವಲ್ಪ ಚುರುಕು ಪಡೆಯಲಿದೆ ಎಂದು ನಿವೇಶನದಾರರು ಹೇಳುತ್ತಾರೆ.

ಬಿಡಿಎ ಅಥವಾ ಕಂದಾಯ ಇಲಾಖೆ ನಡುವೆ ಸಮನ್ವಯತೆ ಕೊರತೆಯಿಂದ ಯೋಜನೆ ಕೈಗೆತ್ತಿಕೊಂಡು 13 ವರ್ಷವಾದರೂ ಸರ್ಕಾರಿ ಭೂಮಿ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಮುಖಂಡರು ಆರೋಪಿಸುತ್ತಾರೆ.

Quote - 193 ಎಕರೆ ಜತೆಗೆ 1300 ಎಕರೆ ಭೂಸ್ವಾದಿನವೂ ಜಟಿಲವಾಗಿದೆ. ನಿವೇಶನ ಖರೀದಿಸಿ ಮನೆ ಕಟ್ಟುತ್ತಿರುವವರಿಗೆ ನೀರು ಒಳಚರಂಡಿ ವಿದ್ಯುತ್ ಸಂಪರ್ಕ ದುಸ್ತರವಾಗಿದೆ. ಆಯುಕ್ತರು ವಾರಕ್ಕೆ ಎರಡು ಬಾರಿಯಾದರೂ ಭೂಸ್ವಾಧೀನ ಪ್ರಗತಿ ಪರಿಶೀಲನೆ ನಡೆಸಬೇಕು. ಸೂರ್ಯಕಿರಣ್‌ ವಕ್ತಾರ ಕೆಂಪೇಗೌಡ ಮುಕ್ತ ವೇದಿಕೆ

Cut-off box - ಜಮೀನು ಸ್ವಾಧೀನದಿಂದ ಪ್ರಯೋಜನ ಏನು? * ವಿವಿಧ ಬ್ಲಾಕ್‌ಗಳ ನಡುವೆ ನೀರು ಒಳ ಚರಂಡಿ ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಿದೆ.‌ * ಒಂದು ಬ್ಲಾಕ್‌ನಿಂದ ಇನ್ನೊಂದು ಬ್ಲಾಕ್‌ಗೆ ಮುಖ್ಯರಸ್ತೆ ಆಂತರಿಕ ರಸ್ತೆಗಳ ಸಂಪರ್ಕ ಸಾಧ್ಯವಾಗಲಿದೆ. * ಮತ್ತಷ್ಟು ನಿವೇಶನ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಬಹುದು. * ಬಾಕಿಯಿರುವ ರಾಜಕಾಲುವೆ ಕಾಮಗಾರಿ ತ್ವರಿತಗೊಳ್ಳಲಿದೆ. * ಮೂಲ ಯೋಜನೆಯಂತೆ ಕೆಲವು ಪ್ರದೇಶಗಳಲ್ಲಿ ಉದ್ಯಾನ ಸಿ.ಎ ನಿವೇಶನಗಳನ್ನು ನಿರ್ಮಾಣ ಮಾಡಲು ಸಾಧ್ಯ. * ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ಈ ಭೂಮಿಯನ್ನು ಬಳಸಿಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.