ADVERTISEMENT

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ಮಹಿಳಾ ವಸತಿನಿಲಯದಲ್ಲಿ ಹಾವು–ಚೇಳು ಕಾಟ!

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಭೇಟಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 16:35 IST
Last Updated 21 ನವೆಂಬರ್ 2024, 16:35 IST
ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ನಾಗಲಕ್ಷ್ಮಿ ಚೌಧರಿ
ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ನಾಗಲಕ್ಷ್ಮಿ ಚೌಧರಿ   

ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಹಾವು–ಚೇಳಿನ ಕಾಟ ಇದ್ದು, ಮೂಲಸೌಕರ್ಯದ ಕೊರತೆ ಇದೆ. ಕೂಡಲೇ ಇದನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು’ ಎಂದು ಕೋರಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರು ವಿದ್ಯಾರ್ಥಿಗಳು ಹಾಗೂ ಮಹಿಳಾ ಬೋಧಕರ ಅಹವಾಲುಗಳನ್ನು ಆಲಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ವಸತಿನಿಲಯದಲ್ಲಿರುವ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ.

‘ಇಲ್ಲಿನ ವಸತಿನಿಲಯದಲ್ಲಿ ಮೆನುವಿನ ಪ್ರಕಾರ ಊಟ–ತಿಂಡಿ ನೀಡುತ್ತಿಲ್ಲ. ಊಟದ ಕೊಠಡಿಯಲ್ಲಿ ಫ್ಯಾನ್‌ ಹಾಗೂ ವಿದ್ಯುತ್‌ ಬಲ್ಬ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಕೊಠಡಿಗಳಲ್ಲಿ ಶಿಲೀಂದ್ರ ಬೆಳೆದ ಕಾರಣ ವಿದ್ಯಾರ್ಥಿನಿಯರು ಕೆಮ್ಮು, ಶೀತ, ಜ್ವರಕ್ಕೆ ತುತ್ತಾಗುತ್ತಿದ್ದಾರೆ. ವಸತಿನಿಲಯದ ನಿರ್ವಹಣೆ ಸಮರ್ಪಕವಾಗಿಲ್ಲ. ಶೌಚಾಲಯಗಳ ಮೇಲ್ಛಾವಣಿ ಕುಸಿದಿದ್ದು, ಕಟ್ಟಡವು ಶಿಥಿಲಾವಸ್ಥೆಯಿಂದ ಕೂಡಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಸತಿನಿಲಯದ ಒಳಗೆ ಹಾಗೂ ಹೊರಗಡೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಳವಡಿವುದೂ ಸೇರಿದಂತೆ ಮೂಲಸೌಲಭ್ಯ ಕಲ್ಪಿಸಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.