ಬೆಂಗಳೂರು: ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ₹2,149.27 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
ಬಿಬಿಎಂಪಿ ಯೋಜನೆ ವಿಭಾಗಕ್ಕೆ ಜೆ.ಸಿ. ರಸ್ತೆ ಎಲಿವೇಟೆಡ್ ಕಾಮಗಾರಿ ಸೇರಿದಂತೆ ನಾಲ್ಕು ಮೇಲ್ಸೇತುವೆಗಳಿಗಾಗಿ ₹404 ಕೋಟಿಗೆ ಅನುಮೋದನೆ ದೊರೆತಿದೆ. ಟೆಂಡರ್‌ಶ್ಯೂರ್ ಕಾಮಗಾರಿಯಲ್ಲಿ ಆರು ರಸ್ತೆಗಳ ಅಭಿವೃದ್ಧಿಗೆ ₹135 ಕೋಟಿ ಜೊತೆ ಮುಂದುವರಿದ ಕಾಮಗಾರಿಗಳಿಗಾಗಿ ₹96 ಕೋಟಿ ನೀಡಲಾಗಿದೆ. ಒಟ್ಟಾರೆ ₹635.93 ಕೋಟಿಯನ್ನು ಯೋಜನಾ ವಿಭಾಗದ ಕಾಮಗಾರಿಗಳ ಅನುಷ್ಠಾನಕ್ಕೆ ಸಮ್ಮತಿಸಲಾಗಿದೆ.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ, ಹೆಬ್ಬಾಳ ವಿಧಾನಸಭೆ ಕ್ಷೇತ್ರಗಳಲ್ಲಿ ಟೆಂಡರ್‌ಶ್ಯೂರ್ ರಸ್ತೆಗಳು ಅಭಿವೃದ್ಧಿಯಾಗಲಿವೆ.ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಬಸವೇಶ್ವರನಗರ ಜಂಕ್ಷನ್, ಇಟ್ಟಮಡು ಜಂಕ್ಷನ್, ಸಾರಕ್ಕಿ ಜಂಕ್ಷನ್ ಮೇಲ್ಸೇತುವೆ ಮುಂದುವರಿದ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ.
‘ಮುಂದುವರಿದ ಕಾಮಗಾರಿಗಳಿಗೆ ₹96 ಕೋಟಿ ಕೊಟ್ಟಿದ್ದಾರೆ. ಇದರಲ್ಲಿ ಗುಬ್ಬಿ ತೋಟದಪ್ಪ ಛತ್ರ ರಸ್ತೆಯನ್ನು ವೈಟ್ ಟಾಪಿಂಗ್ ರಸ್ತೆಯಾಗಿ ನಿರ್ಮಿಸಲಾಗುತ್ತದೆ. ಹಿಂದೆ ನಾವು ಗಾಂಧಿನಗರ ಸುತ್ತಮುತ್ತ ವೈಟ್ ಟಾಪಿಂಗ್ ಕೆಲಸ ಮಾಡಿದೆವು. ಶಾಂತಲಾ ಸಿಲ್ಕ್ ವೃತ್ತದವರೆಗೂ ವೈಟ್ ಟಾಪಿಂಗ್ ಕೆಲಸ ಮುಗಿದಿದೆ. ಅಲ್ಲಿಗೆ ಅಂದಾಜು ವೆಚ್ಚ ಮುಗಿದಿತ್ತು. ಹೀಗಾಗಿ ಗುಬ್ಬಿ ತೋಟದಪ್ಪ ಛತ್ರ ರಸ್ತೆಯ ಕಾಮಗಾರಿಯನ್ನು ಕೈಗೊಳ್ಳಲು ಅನುಮೋದನೆ ಬೇಕಿತ್ತು’ ಎಂದು ಯೋಜನೆ ವಿಭಾಗ
ಮುಖ್ಯ ಎಂಜಿನಿಯರ್ ಲೋಕೇಶ್ ಹೇಳಿದರು.
‘ಸರ್ಕಾರಕ್ಕೆ ಅನುಮೋದನೆಗೆ ಕೇಳಿದ್ದೆವು. ಈಗ ಅನುದಾನದ ಜೊತೆಗೆ ಸಮ್ಮತಿಯೂ ದೊರೆತಿದೆ. ₹7.8 ಕೋಟಿ ವೆಚ್ಚಕ್ಕೆ ಟೆಂಡರ್ ಕೂಡ ಆಗಿದೆ. ಜಲಮಂಡಳಿ, ಬೆಸ್ಕಾಂ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನೂ ಒಳಗೊಂಡಂತೆ ಶಾಂತಲಾ ಸಿಲ್ಕ್ ವೃತ್ತದಿಂದ ರೈಲು ನಿಲ್ದಾಣ ಮುಂಭಾಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಗುಬ್ಬಿ ತೋಟದಪ್ಪಛತ್ರ ರಸ್ತೆಯನ್ನು ಅಭಿವೃದ್ಧಿಗೊಳಿ
ಸಲಾಗುತ್ತದೆ’ ಎಂದರು.
ಅನುಮೋದನೆಯಾದರಷ್ಟೇ ಕಾಮಗಾರಿ: ‘ರಸ್ತೆಗಳು ಹಾಳಾಗಿವೆ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಯೋಜನೆಗಳಿಗೆ ಅನುಮೋದನೆ ದೊರೆತು, ಹಣ ಬಿಡುಗಡೆಯಾದರೆ ಕಾಮಗಾರಿಗಳನ್ನು ಬೇಗ ಮಾಡಬಹುದು. ಕಾಮಗಾರಿಗಳು ಹೆಚ್ಚಾಗಿ, ಅದಕ್ಕೆ ವೆಚ್ಚವೂ ವೃದ್ಧಿಯಾದಾಗ ನಮಗೆ ಅನುಮೋದನೆ ಸಿಗಬೇಕು. ಅದು ಸಿಕ್ಕ ಮೇಲಷ್ಟೇ ಯಾವುದಾದರೂ ಕಾಮಗಾರಿಯನ್ನು ನಾವು ಆರಂಭಿಸಲು ಸಾಧ್ಯ’ ಎಂದು ಲೋಕೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.