ADVERTISEMENT

ನಾಗಸಂದ್ರ–ಮಾದಾವರ ಮೆಟ್ರೊ ಸಂಚಾರ: ದಿನಾಂಕ ನಿಗದಿಗೆ ಕೋರಿಕೆ

ಮೂರು ನಿಲ್ದಾಣಗಳಿಂದ ಪ್ರಯಾಣಿಸುವವ ಸಂಖ್ಯೆ ತಿಂಗಳಿಗೆ 2 ಲಕ್ಷ ಹೆಚ್ಚಳದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 16:16 IST
Last Updated 13 ಅಕ್ಟೋಬರ್ 2024, 16:16 IST
ಹಸಿರು ಮಾರ್ಗದ ಮೆಟ್ರೊ ರೈಲು
ಹಸಿರು ಮಾರ್ಗದ ಮೆಟ್ರೊ ರೈಲು   

ಬೆಂಗಳೂರು: ‘ನಮ್ಮ ಮೆಟ್ರೊ’ ಹಸಿರು ಮಾರ್ಗದಲ್ಲಿ ನಾಗಸಂದ್ರ–ಮಾದಾವರ ನಡುವೆ ಈ ತಿಂಗಳ ಕೊನೆಯೊಳಗೆ ಮೆಟ್ರೊ ರೈಲು ಸಂಚಾರ ಆರಂಭಿಸುವ ಗುರಿ ಇಟ್ಟುಕೊಂಡಿರುವ ಬಿಎಂಆರ್‌ಸಿಎಲ್‌, ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.

ಕಾಮಗಾರಿಗಳು ಪೂರ್ಣಗೊಂಡು, ಎಲ್ಲ ಪರೀಕ್ಷೆಗಳು ಮುಕ್ತಾಯಗೊಂಡಿವೆ. ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಅ.3ರಂದು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಅ.4ರಂದು ಒಪ್ಪಿಗೆ ನೀಡಿದ್ದಾರೆ. ಉದ್ಘಾಟನೆಗೆ ದಿನ ನಿಗದಿಗಾಗಿ ಬಿಎಂಆರ್‌ಸಿಎಲ್‌ ಕಾಯುತ್ತಿದೆ.

ಹಸಿರು ಮಾರ್ಗದ ವಿಸ್ತರಿತ ಪ್ರದೇಶದಲ್ಲಿ 3.7 ಕಿಲೋಮೀಟರ್‌ ಮಾರ್ಗ ನಿರ್ಮಾಣಗೊಂಡಿದ್ದು, ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ದಿನಕ್ಕೆ ಅಂದಾಜು 6,500, ತಿಂಗಳಿಗೆ ಸುಮಾರು 2 ಲಕ್ಷ ಹೆಚ್ಚಾಗುವ ನಿರೀಕ್ಷೆ ಇದೆ. ಅಂಚೆಪಾಳ್ಯ, ಜಿಂದಾಲ್ ನಗರ ಸಹಿತ ಸುತ್ತಮುತ್ತಲಿನ ಜನರಲ್ಲದೇ, ನೆಲಮಂಗಲ ಕಡೆಯಿಂದ ಬೆಂಗಳೂರಿಗೆ ಬರುವವರು ಕೂಡ ಮಾದಾವರವರೆಗೆ ಬಸ್‌ ಅಥವಾ ಖಾಸಗಿ ವಾಹನಗಳಲ್ಲಿ ಬಂದು, ಮಾದಾವರದಿಂದ ಮೆಟ್ರೊದಲ್ಲಿ ಸಂಚರಿಸುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಉದ್ಘಾಟನೆಗೆ ದಿನಾಂಕ ನಿಗದಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಬಿಎಂಆರ್‌ಸಿಎಲ್‌ ಪತ್ರ ಬರೆದಿದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ದಿನಾಂಕ ನಿಗದಿಯಾಗಲಿದೆ. ಈಗಿರುವ ರೈಲುಗಳನ್ನೇ ವಿಸ್ತರಿತ ಮಾರ್ಗದಲ್ಲಿ ಓಡಿಸುವುದರಿಂದ ರೈಲಿಗಾಗಿ ಕಾಯಬೇಕಿಲ್ಲ. ರಾಜ್ಯ ಸರ್ಕಾರದ ಅನುಮತಿ ಸಿಕ್ಕಿದ ಕೂಡಲೇ ಸಂಚಾರ ಆರಂಭಗೊಳ್ಳಲಿದೆ. ಅಕ್ಟೋಬರ್‌ ಅಂತ್ಯದ ಒಳಗೆ ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸಂಚರಿಸಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.