ADVERTISEMENT

ಸಾಮಾಜಿಕ ಜಾಲತಾಣ‌ ಸರ್ವಜ್ಞ ಪೀಠದಂತಾಗಿವೆ: ನಾಗತಿಹಳ್ಳಿ ಚಂದ್ರಶೇಖರ್

ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 15:54 IST
Last Updated 7 ಜುಲೈ 2024, 15:54 IST
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್   

ಬೆಂಗಳೂರು: ‘ಸಾಮಾಜಿಕ ಜಾಲತಾಣಗಳು ಸರ್ವಜ್ಞ ಪೀಠದಂತೆ, ನ್ಯಾಯಾಲಯಗಳಂತೆ ಕೆಲಸ ಮಾಡಲು ಶುರುಮಾಡಿವೆ. ಇದರಿಂದ ಸತ್ಯವು ಅಗ್ಗವಾಗಿದೆ’ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. 

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರದಲ್ಲಿ ಗುರುಪ್ರಸಾದ ಕಾಗಿನೆಲೆ ಅವರ ‘ಸತ್ಕುಲಪ್ರಸೂತರು’, ಸಂತೋಷ್ ಅನಂತಪುರ ಅವರ ‘ತೃಷೆ’, ಮೌನೇಶ ಬಡಿಗೇರ ಅವರ ‘ಜೀವ ಜಾತ್ರೆ’ ಹಾಗೂ ‘ಪ್ರಜಾವಾಣಿ’ ಉಪ ಸಂಪಾದಕಿ ಸುಶೀಲಾ ಡೋಣೂರ ಅವರ ‘ಪೀಜಿ’ ಕೃತಿಗಳನ್ನು ಬಿಡುಗಡೆಮಾಡಿ, ಮಾತನಾಡಿದರು.

‘ಕಳೆದೊಂದು ದಶಕದಲ್ಲಿ ಸಾಮಾಜಿಕ ಜಾಲತಾಣ ಅಗಾಧವಾಗಿ ಬೆಳೆದು ನಿಂತಿದೆ. ಪ್ರಭುತ್ವವು ಅದನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದೇವೆ. ಈ ಜಾಲತಾಣಗಳು ಸತ್ಯವನ್ನು ಉತ್ಪಾದಿಸಲು ತೊಡಗಿಕೊಂಡಿವೆ. ಉತ್ಪಾದನೆ ಮತ್ತು ಶೋಧನೆಯ ನಡುವೆ ವ್ಯತ್ಯಾಸವಿದ್ದು, ಉತ್ಪಾದನೆಯಿಂದ ಸತ್ಯ ಅಗ್ಗವಾಗುತ್ತಿದೆ’ ಎಂದು ತಿಳಿಸಿದರು. 

ADVERTISEMENT

‘ಸಾಹಿತ್ಯದ ಕೆಲಸ ಅನುಭವ ಹಾಗೂ ಸತ್ಯದ ಶೋಧನೆ. ಬರಹಗಾರರು ಸತ್ಯದ ಹುಟುಕಾಟದಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣಗಳ ಉತ್ಪ್ರೇಕ್ಷೆಯ ಮುಂದೆ ಪ್ರಬುದ್ಧರ ಮುಗ್ಧತೆಯೂ ಹೋಗಿದೆ. ಸಮಾಧಾನವೂ ಕಳೆದು ಹೋಗಿದ್ದು, ಕಲೆಯ ಆಸ್ವಾದನೆ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು. 

ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಹಾಗೂ ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕಿ ರಶ್ಮಿ ಎಸ್. ಕೃತಿಯ ಬಗ್ಗೆ ಮಾತಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.