ADVERTISEMENT

ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಸಂವೇದನಾಶೂನ್ಯರಾಗಿಸಿದ್ದೇವೆ: ನಾಗೇಶ ಹೆಗಡೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 7:45 IST
Last Updated 21 ಜುಲೈ 2023, 7:45 IST
   

ಬೆಂಗಳೂರು: ಈ ಕಾಲದಲ್ಲಿ ನಾವು ಮಗುವಿನ ಕೈಗೆ ಮೊಬೈಲ್ ಫೋನ್ ಕೊಟ್ಟು, ಅದನ್ನು ಸಂವೇದನಾಶೂನ್ಯ ಲೋಕಕ್ಕೆ ಕಳುಹಿಸುತ್ತಿದ್ದೇವೆ. ಮೊಬೈಲ್ ಪಡೆದುಕೊಂಡ ಮಗುವಿನ ಪಂಚೇಂದ್ರಿಯಗಳ ಕೆಲಸವೇ ನಿಂತುಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಹಿರಿಯ ವಿಜ್ಞಾನ ಲೇಖಕ ನಾಗೇಶ ಹೆಗಡೆ, ಮಕ್ಕಳಿಗೆ ವಿಜ್ಞಾನವನ್ನು ಸುಲಭವಾಗಿ ಕಲಿಸುವಂತಾಗಬೇಕು, ಈ ಮೂಲಕ ಪೋಷಕರಿಗೂ ಮಗುವಿನ ಮೂಲಕವೇ ವೈಜ್ಞಾನಿಕ ಸತ್ಯಗಳ ಅರಿವು ಮೂಡಿಸುವಂತಾಗಬೇಕು ಎಂದು ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಹಾಗೂ ನವದೆಹಲಿಯ ವಿಜ್ಞಾನ್ ಪ್ರಸಾರ್ ಜಂಟಿಯಾಗಿ ಆಯೋಜಿಸಿದ್ದ 'ಕನ್ನಡದಲ್ಲಿ ವಿಜ್ಞಾನ ಸಂವಹನ, ಜನಪ್ರಿಯತೆ ಮತ್ತು ವಿಸ್ತರಣೆ‘ ವಿಷಯದಲ್ಲಿ ಮಂಗಳವಾರ ಆರಂಭವಾದ ಎರಡು ದಿನಗಳ ಮುಕ್ತ ಚರ್ಚಾಗೋಷ್ಠಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ವಿಶೇಷ ಅತಿಥಿಯಾಗಿ ವಿಜ್ಞಾನ ಪ್ರಸಾರ್‌ನ ಮುಖ್ಯ ವಿಜ್ಞಾನಿ ಡಾ.ಟಿ.ವಿ.ವೆಂಕಟೇಶ್ವರನ್, ಮುಖ್ಯ ಅತಿಥಿಯಾಗಿ ವಿಜ್ಞಾನಿ ಡಾ.ಟಿ.ಆರ್.ಅನಂತರಾಮು, ಅಕಾಡೆಮಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಎಂ.ರಮೇಶ್ ಹಾಗೂ 'ಕುತೂಹಲಿ ಸ್ಕೋಪ್' ಸಂಯೋಜಕ ಕೊಳ್ಳೇಗಾಲ ಶರ್ಮಾ ಅವರು ವೇದಿಕೆಯಲ್ಲಿದ್ದರು.

ADVERTISEMENT

ಮೊದಲ ಗೋಷ್ಠಿಯಲ್ಲಿ ಡಾ.ಟಿ.ವಿ.ವೆಂಕಟೇಶ್ವರನ್ ಅವರು ಭಾರತದಲ್ಲಿ ವಿಜ್ಞಾನ ಸಂವಹನ ಕುರಿತು ಮಾಹಿತಿ ನೀಡಿದರು. ಇಸ್ರೋದ ಮಾಜಿ ಹೆಚ್ಚುವರಿ ನಿರ್ದೇಶಕ ಡಾ.ಬಿ.ಆರ್.ಗುರುಪ್ರಸಾದ್ ಅವರು ಗೋಷ್ಠಿ ನಡೆಸಿಕೊಟ್ಟರು.

'ಕನ್ನಡದಲ್ಲಿ ತಂತ್ರಜ್ಞಾನ ಸಂವಹನ' ಗೋಷ್ಠಿಯಲ್ಲಿ ಹಿರಿಯ ವೈದ್ಯ ಡಾ.ನಾ.ಸೋಮೇಶ್ವರ, ವಿಜ್ಞಾನ ಬರಹಗಾರ ವಿಕ್ರಮ್ ಜೋಶಿ ಹಾಗೂ ಕೊಳ್ಳೇಗಾಲ ಶರ್ಮಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಅವಿನಾಶ್ ಬಿ. ಗೋಷ್ಠಿ ನಿರ್ವಹಿಸಿದರು.

ಸಂಜೆ ನಡೆದ 'ಕನ್ನಡದಲ್ಲಿ ಜನಪ್ರಿಯ ವಿಜ್ಞಾನ' ಗೋಷ್ಠಿಯಲ್ಲಿ ಟೀಚರ್ ಮ್ಯಾಗಜಿನ್ ಸಂಪಾದಕ ರಾಮಕೃಷ್ಣ ಆರ್., ತಂತ್ರಜ್ಞಾನ ತಜ್ಞ ಡಾ.ಉದಯಶಂಕರ ಪುರಾಣಿಕ, ಎಸ್.ಕುಮಾರ್, ಓಂಶಿವಪ್ರಕಾಶ್ ಹೆಚ್.ಎಲ್., ಡಾ.ಆನಂದ್ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಡಾ.ದೀಪಾ ಎಂ.ಬಿ. ಗೋಷ್ಠಿ ನಡೆಸಿಕೊಟ್ಟರು. ರಾಜ್ಯದ ವಿವಿಧೆಡೆಯಿಂದ ವಿಜ್ಞಾನ ಸಂವಹನದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾದ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.