ಬೆಂಗಳೂರು: ಕ್ರಷರ್, ಕ್ವಾರಿ ಮತ್ತು ಲಾರಿ ಮಾಲೀಕರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಪ್ರತಿದಿನ ಲಕ್ಷಾಂತರ ರೂಪಾಯಿ ದಂಡ ವಿಧಿಸುವ ಮೂಲಕ ಬದುಕಲು ಕಷ್ಟ ಆಗುವಂತೆ ಮಾಡುತ್ತಿದೆ. ಇದರ ಪರಿಣಾಮವಾಗಿಯೇ ರಾಮನಗರದಲ್ಲಿ ಲಾರಿ ಮಾಲೀಕ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಆರೋಪಿಸಿದೆ.
ರಾಜಧನ ಪಾವತಿ ವ್ಯವಸ್ಥೆಯನ್ನು ಇಲ್ಲಿಯವರೆಗೆ ಸಮರ್ಪಕಗೊಳಿಸಿಲ್ಲ. ಅನುಮತಿ ಪಡೆದ ಕ್ರಷರ್‌ನಿಂದಲೇ ಕಲ್ಲುಗಳನ್ನು ತಂದು ಹಾಕಲಾಗಿತ್ತು. ಕಲ್ಲು ಸಾಗಣೆಗೆ ಪರವಾನಗಿ ಪಡೆದು ಅಲ್ಲಿಂದ ನಾಗೇಶ್, ಸಾಗಣೆ ಮಾಡಿದ್ದರು. ಆದರೆ, ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತುಕೊಂಡು ಬೇರೆ ಕಡೆಯಿಂದ ಸಾಗಾಟ ಮಾಡಿದ್ದಾರೆ ಎಂದು ₹ 8 ಲಕ್ಷ ದಂಡ ವಿಧಿಸಿದ್ದಾರೆ. ಇದರಿಂದ ನೊಂದು ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಆರೋಪಿಸಿದರು.
ಕಾನೂನು ಸರಿ ಇದೆ. ಆದರೆ, ಅದನ್ನು ಸರಿಯಾಗಿ ಅನುಷ್ಠಾನಗೊಳಿಸದೇ ಕ್ವಾರಿ, ಕ್ರಷರ್ ಮತ್ತು ಲಾರಿ ಮಾಲೀಕರನ್ನು, ಗುತ್ತಿಗೆದಾರರನ್ನು ದಂಡದ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ. ಅನಧಿಕೃತ ಗಣಿಗಾರಿಕೆ ಸರಾಗವಾಗಿ ನಡೆಯುತ್ತಿದೆ. ಅಧಿಕೃತ ಗಣಿಗಾರಿಕೆ ನಡೆಸುವವರಿಗೇ ಸರ್ಕಾರ ತೊಂದರೆ ನೀಡುತ್ತಿದೆ ಎಂದು ಉಪಾಧ್ಯಕ್ಷ ಕಿರಣ್ ಜೆ., ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ದೂರಿದರು.
ನಾಗೇಶ್ ಕುಟುಂಬಕ್ಕೆ ಒಂದು ವಾರದ ಒಳಗೆ ₹ 1 ಕೋಟಿ ಪರಿಹಾರ ನೀಡಬೇಕು. ರಾಜಧನ ಪಾವತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಒಂದು ವಾರದ ಒಳಗೆ ಸಮಸ್ಯೆ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಧ್ಯಕ್ಷರು ಎಚ್ಚರಿಸಿದರು.
ಕಾನೂನು ಸಲಹೆಗಾರ ಮುನಿರಾಜು, ಅಸೋಸಿಯೇಶನ್‌ನ ಪ್ರಶಾಂತ್ ಉಪ್ಪರಗಿ, ಮಂಜುನಾಥ್ ಲಕ್ಕವಳ್ಳಿ, ಜನನಿ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.