ಬೆಂಗಳೂರು: ವಸತಿ ಕಟ್ಟಡಗಳ ನಿರ್ಮಾಣಕ್ಕೆ ಒಂದೇ ದಿನದಲ್ಲಿ ನಕ್ಷೆ ನೀಡಲಾಗುತ್ತದೆ ಎಂಬ ಘೋಷ ವಾಕ್ಯದಲ್ಲಿ ಆರಂಭವಾದ ‘ನಂಬಿಕೆ ನಕ್ಷೆ’ ಕುಂಟುತ್ತಾ ಸಾಗುತ್ತಿದೆ. ಕಾಲಮಿತಿಯಲ್ಲಿ ನಾಗರಿಕರಿಗೆ ನಕ್ಷೆ ಸಿಗದೆ, ಬಿಬಿಎಂಪಿ ಕಚೇರಿಗಳಿಗೆ ಅಲೆಯುವುದು ಇನ್ನೂ ನಿಂತಿಲ್ಲ.
‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಬಿಬಿಎಂಪಿ ಕಚೇರಿಗೆ ಹೋಗದೆ ಕಟ್ಟಡ ನಕ್ಷೆ ಪಡೆಯುವ ‘ನಂಬಿಕೆ ನಕ್ಷೆ– ನಿಮ್ಮ ಮನೆ ನಕ್ಷೆ ನಿಮ್ಮ ಮನೆ ಬಾಗಿಲಿಗೆ’ ಯೋಜನೆ ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯಗಳಲ್ಲಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿತ್ತು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯನ್ನು ಸೆಪ್ಟೆಂಬರ್ 2ರಿಂದ ಎಲ್ಲ ವಲಯಗಳಿಗೂ ವಿಸ್ತರಿಸಿದ್ದರು. ಬಹುತೇಕ ಎರಡು ತಿಂಗಳಾದರೂ ಯೋಜನೆ ಹಳಿಗೇ ಬಂದಿಲ್ಲ. ಆನ್‌ಲೈನ್‌ನಲ್ಲಿ ನಕ್ಷೆ ಲಭ್ಯವಾಗುತ್ತಿಲ್ಲ. ಕಂದಾಯ ವಿಭಾಗದ ಅಧಿಕಾರಿಗಳ ಕಚೇರಿಗೆ ಹೋಗಿ, ಒಂದಷ್ಟು ದಿನ ಅಲೆದರೆ ಮಾತ್ರ ನಕ್ಷೆ ಸಿಗುತ್ತಿದೆ.
‘ನಂಬಿಕೆ ನಕ್ಷೆ’ ಯೋಜನೆಯಂತೆ, 50 x 80 ಅಡಿ ಅಳತೆಯವರೆಗಿನ ವಸತಿ ಕಟ್ಟಡಗಳಿಗೆ ಎಲ್ಲ ದಾಖಲೆಗಳು ಸಿದ್ಧವಿದ್ದರೆ 15 ದಿನದಲ್ಲಿ ಅನುಮೋದಿತ ನಕ್ಷೆ ಲಭ್ಯವಾಗಬೇಕು. ಅರ್ಜಿ ಸಲ್ಲಿಸಿದ ದಿನ ‘ತಾತ್ಕಾಲಿಕ ನಕ್ಷೆ’ ಸಿಗಬೇಕು. ಇದೆಲ್ಲ ಪ್ರಕ್ರಿಯೆ ಆನ್‌ಲೈನ್‌ನಲ್ಲೇ ನಡೆಯಬೇಕಿದ್ದು, ಬಿಬಿಎಂಪಿ ಸಿಬ್ಬಂದಿಯನ್ನು ಕಚೇರಿಗೆ ಹೋಗಿ ಭೇಟಿ ಮಾಡುವಂತಿಲ್ಲ. ಆದರೆ ಇದೆಲ್ಲ, ಯೋಜನೆಯ ಉದ್ದೇಶಪತ್ರದಲ್ಲೇ ಉಳಿದುಕೊಂಡಿದೆ.
‘ಆನ್‌ಲೈನ್‌ನಲ್ಲಿ ನಕ್ಷೆಗೆ ಅರ್ಜಿ ಸಲ್ಲಿಸಿದರೆ ನಗರ ಯೋಜನೆ ಅಧಿಕಾರಿಗಳ ಪ್ರಕ್ರಿಯೆ ಬೇಗ ಮುಗಿಯುತ್ತಿದೆ. ಆದರೆ ಕಂದಾಯ ವಿಭಾಗದ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಕಂದಾಯ ವಿಭಾಗದಲ್ಲಿನ ದಾಖಲೆಗಳನ್ನು ಪರಿಶೀಲಿಸಿ, ಅದು ಹೊಂದಿಕೆಯಾದರೆ ನಕ್ಷೆ ಅನುಮೋದನೆ ನೀಡಬೇಕು. ಇದನ್ನು ಪಾಲಿಸದ ಸಹಾಯಕ ಕಂದಾಯ ಅಧಿಕಾರಿಗಳು (ಎಆರ್‌ಒ), ಹಿಂದಿನಂತೆಯೇ ಮಾಲೀಕರು ಅಥವಾ ಎಂಜಿನಿಯರ್ ಅವರನ್ನು ‘ಸಂಪರ್ಕಿಸಬೇಕು’ ಎಂದು ಬಯಸುತ್ತಿದ್ದಾರೆ’ ಎಂದು ಪದ್ಮನಾಭನಗರದ ಆಸ್ತಿಯೊಂದರ ಮಾಲೀಕ ರಘುನಾಥ್ ದೂರಿದರು.
‘ಒಂದು ವ್ಯವಸ್ಥೆ ಪ್ರಾಯೋಗಿಕವಾಗಿ ಯಶಸ್ಸು ಕಂಡ ಮೇಲೆ, ಅದನ್ನು ಪೂರ್ಣಪ್ರಮಾಣದಲ್ಲಿ ಆನ್‌ಲೈನ್‌ನಲ್ಲೇ ಜಾರಿಗೊಳಿಸಬೇಕಾಗಿತ್ತು. ಕಾಲಮಿತಿಯಲ್ಲಿ ನಕ್ಷೆ ಅನುಮೋದನೆ ಎಂದು ಹೇಳಲಾಗಿದ್ದರೂ, ಎಆರ್‌ಒಗಳಿಗೆ ಅದನ್ನು ನಿಗದಿಪಡಿಸಿಲ್ಲ. ಏಳು ದಿನದಲ್ಲಿ ಅವರು ಅನುಮೋದನೆ ನೀಡದಿದ್ದರೆ ಸ್ವಯಂಚಾಲಿತವಾಗಿ ಸಮ್ಮತಿ ದೊರೆಯಬೇಕು. ಆದರೆ, ಆ ಪ್ರಕ್ರಿಯೆಯೇ ನಡೆಯುತ್ತಿಲ್ಲ’ ಎಂದು ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿ ರಮೇಶ್ ಆರೋಪಿಸಿದರು.
‘ನಗರದಲ್ಲಿರುವ ಎಲ್ಲ ಆಸ್ತಿಗಳಿಗೆ ಇ–ಖಾತಾ ಒದಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಜೊತೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವೂ ನಡೆಯುತ್ತಿದೆ. ಹೀಗಾಗಿ, ‘ನಂಬಿಕೆ ನಕ್ಷೆ’ಯಲ್ಲಿನ ಪ್ರಕ್ರಿಯೆ ನಿಧಾನವಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಎಆರ್‌ಒಗಳು ವಿವರಣೆ ನೀಡಿದರು.
‘ವ್ಯತ್ಯಾಸವೇನೂ ಆಗಿಲ್ಲ’
‘ಹೊಸ ಯೋಜನೆ ಜಾರಿಗೆ ಬಂದಿದ್ದರೂ ಹಳೆಯ ವ್ಯವಸ್ಥೆಗಿಂತ ಹೆಚ್ಚು ವ್ಯತ್ಯಾಸವೇನಿಲ್ಲ. ‘ನಂಬಿಕೆ ನಕ್ಷೆ’ಯ ಘೋಷವಾಕ್ಯದಂತೆ ‘ತಾತ್ಕಾಲಿಕ ನಕ್ಷೆ’ಯೂ ಒಂದು ದಿನದಲ್ಲಿ ಸಿಗುತ್ತಿಲ್ಲ. ಆ ಆಯ್ಕೆಯೇ ಇಲ್ಲದಂತೆ ಮಾಡಿದ್ದಾರೆ. ಹಿಂದಿನಂತೆಯೇ ಎಆರ್‌ಒಗಳನ್ನು ಅವರ ಕಚೇರಿಯಲ್ಲಿ ಅವರಿರುವ ಸಮಯದಲ್ಲೇ ಹೋಗಿ ಆಗಾಗ ಭೇಟಿ ಮಾಡಬೇಕು. ‘ಬಿಬಿಎಂಪಿ ಕಚೇರಿಗೆ ಹೋಗುವಂತಿಲ್ಲ’ ಎಂಬ ಹೇಳಿಕೆ ಇಲ್ಲಿ ಅನುಷ್ಠಾನವಾಗಿಲ್ಲ. ನಾಗರಿಕರ ಅಲೆದಾಟ ನಿಂತಿಲ್ಲ’ ಎಂದು ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿ ಸರ್ವೋತ್ತಮ್ ಅನುಭವ ಹಂಚಿಕೊಂಡರು.
- ‘ಇನ್ನೂ ಸ್ವಯಂಚಾಲಿತವಾಗಿಲ್ಲ’
‘ಕಟ್ಟಡಗಳಿಗೆ ‘ನಂಬಿಕೆ ನಕ್ಷೆ’ ಯೋಜನೆಯಡಿ ಸ್ವಯಂಚಾಲಿತವಾಗಿ ನಕ್ಷೆ ಅನುಮೋದನೆಯಾಗುವುದನ್ನು ಪೂರ್ಣವಾಗಿ ಜಾರಿಗೊಳಿಸಲಾಗಿಲ್ಲ. ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಅವರ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರಿಂದ ಅನುಮೋದನೆಯಾದ ಮೇಲಷ್ಟೇ ನಕ್ಷೆ ಅನುಮೋದನೆಯಾಗುತ್ತಿದೆ. ಪ್ರಾರಂಭದ ಹಂತದಲ್ಲೇ ಸ್ವಯಂಚಾಲಿತ ವ್ಯವಸ್ಥೆ ಇದ್ದರೆ ಸಮಸ್ಯೆಯಾಗಬಹುದು ಎಂದು ತಡೆಹಿಡಿಯಲಾಗಿದೆ. ಆದರೆ ಎಆರ್‌ಒಗಳಿಂದ ಅನುಮೋದನೆ ವಿಳಂಬವಾಗುತ್ತಿರುವುದು ನಿಜ. ಅವರ ಹಂತದಲ್ಲೇ ಅರ್ಜಿ ಅಥವಾ ಕಡತಗಳು ಹೆಚ್ಚು ಬಾಕಿ ಉಳಿದಿವೆ’ ಎಂದು ನಗರ ಯೋಜನೆ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.