ADVERTISEMENT

ಇಂಗ್ಲಿಷ್‌ ನಾಮಫಲಕ ಧ್ವಂಸ: ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 53 ಮಂದಿ ಬಂಧನ

ಜ.10ರವರೆಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 3:19 IST
Last Updated 29 ಡಿಸೆಂಬರ್ 2023, 3:19 IST
<div class="paragraphs"><p>ಟಿ.ಎ. ನಾರಾಯಣಗೌಡ</p></div>

ಟಿ.ಎ. ನಾರಾಯಣಗೌಡ

   

ಬೆಂಗಳೂರು: ಇಂಗ್ಲಿಷ್‌ ನಾಮಫಲಕಗಳನ್ನು ಕಿತ್ತು ಬಿಸಾಡಿದ, ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿ 53 ಮಂದಿ ಕಾರ್ಯಕರ್ತರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಬುಧವಾರ ನಡೆಸಿದ ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ನಡೆದಿದ್ದವು. ನಾರಾಯಣ ಗೌಡ ಸೇರಿ 53 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ರಾತ್ರಿ 1 ಗಂಟೆಗೆ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದಾಗ ನ್ಯಾಯಾಧೀಶರು ಜ.10ರವರೆಗೆ ನ್ಯಾಯಾಂಗ ಬಂಧನ ವಿಧಿಸಿದರು.

ADVERTISEMENT

ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾಗ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದು, ‘ಇದೊಂದು ಮುಠ್ಠಾಳ ಸರ್ಕಾರ. ಪ್ರತಿಭಟನೆಯನ್ನು ರಾಜ್ಯಕ್ಕೆ ವಿಸ್ತರಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರವೇ ಕಾರ್ಯಕರ್ತರು ಬಸ್‌ ತಡೆದು ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು.

‘ಅಕ್ರಮವಾಗಿ ಪ್ರತಿಭಟನೆ ನಡೆಸಿದ್ದ ಸಂಬಂಧ ವಿವಿಧ ಠಾಣೆಗಳಲ್ಲಿ 10 ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನು ಬಂಧಿಸಲಾಗಿದೆ. ಸದ್ಯ ಎಲ್ಲರೂ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ನಾಮಫಲಕಗಳಿಗೆ ಹಾನಿ ಮಾಡುವುದನ್ನು ತಡೆದು 1,000ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿದವರನ್ನು ಬಂಧಿಸಲಾಗಿದೆ. ನಾಮಫಲಕ ಹಾನಿ ಮಾಡಿರುವ ಬಗ್ಗೆ ವ್ಯಾಪಾರಿಗಳು ದೂರು ನೀಡುತ್ತಿದ್ದು, ಇನ್ನಷ್ಟು ಪ್ರಕರಣಗಳು ದಾಖಲಾಗಲಿವೆ’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಮಾಹಿತಿ ನೀಡಿದ್ದಾರೆ.

ಬಿಡುಗಡೆಗೆ ಆಗ್ರಹ: ನಾರಾಯಣ ಗೌಡ ಮತ್ತು ಸಂಗಡಿಗರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ವಿಕಾಸ ರಂಗ, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತಿತರ ಸಂಘಟನೆಗಳು ಆಗ್ರಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.