ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಪಾಲಿಗೆ 2018ರ ಮಹತ್ತರ ಮೈಲಿಗಲ್ಲು ಸಾಧಿಸಿದ ವರ್ಷವೆನಿಸಿಕೊಳ್ಳಲಿಲ್ಲ. ನಮ್ಮ ಮೆಟ್ರೊ ಎರಡನೇ ಹಂತದ ಯೋಜನೆ ಅನುಷ್ಠಾನದಲ್ಲಿ ವರ್ಷದುದ್ದಕ್ಕೂ ಗೊಂದಲಗಳು ಮುಂದುವರಿದವು.
ಎರಡನೇ ಹಂತದ ಕಾಮಗಾರಿಗಳು ಕುಂಟುತ್ತಾ ಸಾಗಿದವು. ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿವರೆಗಿನ ಮಾರ್ಗ (ರೀಚ್– 2ಎ ಮತ್ತು 2ಬಿ) ಹಾಗೂ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ (4ಬಿ) ಮಾರ್ಗದ ಕಾಮಗಾರಿಗಳು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕಿತ್ತು. ಈ ಗಡುವನ್ನು ಒಂದು ವರ್ಷ ವಿಸ್ತರಿಸಲಾಯಿತು.
* ಗೊಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಬರುವ 13.79 ಕಿ.ಮೀ ಉದ್ದದ ಸುರಂಗ ಮಾರ್ಗಕ್ಕೆ (ಡೇರಿ ವೃತ್ತದಿಂದ ನಾಗವಾರ) ನಿಗಮವು ಟೆಂಡರ್ ಕರೆದಿತ್ತು. ಆದರೆ ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳು ನಿಗದಿತ
ಮೊತ್ತಕ್ಕಿಂತ ಶೇ 60ಕ್ಕಿಂತಲೂ ಹೆಚ್ಚು ದರವನ್ನು ನಮೂದಿಸಿದ್ದವು. ಹಾಗಾಗಿ ನಿಗಮವು ಮರು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹಾಗಾಗಿ ಈಗ ಮೂಲ ಯೋಜನೆಯನ್ನೇ ಬದಲಿಸಬೇಕೋ, ಹಾಗೊ ಈ ಹಿಂದಿನ ಯೋಜನೆ ಪ್ರಕಾರವೇ ಮರುಟೆಂಡರ್ ಕರೆಯಬೇಕೋ ಎಂಬ ಗೊಂದಲದಲ್ಲಿದೆ.
* ನಾಗವಾರದಿಂದ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗದ ವಿಚಾರದಲ್ಲೂ ನಿಗಮ ಗೊಂದಲ ಎದುರಿಸಿತು.
* ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿ ಸಾಕಷ್ಟು ಪರಾಮರ್ಶೆಗೆ ಒಳಪಡಿಸಿದ ಬಳಿಕ, ನಾಗವಾರ– ಹೆಗಡೆನಗರ– ಜಕ್ಕೂರು– ಯಲಹಂಕ ಮಾರ್ಗವಾಗಿ ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಹೆಗಡೆ ನಗರ– ಜಕ್ಕೂರು ನಡುವೆ ಪೆಟ್ರೋಲಿಯಂ ಪೈಪ್‌ಲೈನ್ ಹಾದು ಹೋಗಿರುವುದರಿಂದ ಮೆಟ್ರೊ ಕಾಮಗಾರಿ ನಡೆಸಲು ಅಸಾಧ್ಯ ಎಂಬ ಕಾರಣಕ್ಕೆ ನಾಗವಾರ– ಹೆಬ್ಬಾಳ– ಯಲಹಂಕ ಮೂಲಕ ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕಿಸಲು ನಿಗಮ ಮುಂದಾಗಿದೆ.
* ಆರು ಬೋಗಿಗಳ ಮೂರು ರೈಲುಗಳು ನೇರಳೆ ಮಾರ್ಗದಲ್ಲಿ ಸಂಚಾರ ಆರಂಭಿಸಿದವು. ಮೂರನೇ ಹಂತದ ಮೆಟ್ರೊ ಮಾರ್ಗವನ್ನು ವರ್ತುಲ ರಸ್ತೆಯಲ್ಲಿ ನಿರ್ಮಿಸುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿತು.
ಪದೇ ಪದೇ ಸಮಸ್ಯೆ
ಯಲಚೇನಹಳ್ಳಿ ನಿಲ್ದಾಣದ ಬಳಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಆರ್.ವಿ.ರಸ್ತೆ–ಯಲಚೇನಹಳ್ಳಿ ನಿಲ್ದಾಣದ ನಡುವೆ ಫೆಬ್ರುವರಿಯಲ್ಲಿ ಒಂದು ದಿನದ ಮಟ್ಟಿಗೆ ಮೆಟ್ರೊ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ದುರಸ್ತಿ ಕಾರ್ಯ ನಡೆಸಬೇಕಾಯಿತು.
ಟ್ರಿನಿಟಿ ನಿಲ್ದಾಣದ ಬಳಿ ಪಿಲ್ಲರ್ ಸಂಖ್ಯೆ 155ರ ವಯಡಕ್ಟ್ ಬಳಿ ಕಾಂಕ್ರೀಟ್ ರಚನೆಯಲ್ಲಿ ಡಿಸೆಂಬರ್ 13ರಂದು ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮೆಟ್ರೊ ಸಂಚಾರ ವ್ಯತ್ಯಯವಾಗಿತ್ತು. ಇದನ್ನು ದುರಸ್ತಿಪಡಿಸಲು ಎಂ.ಜಿ.ರಸ್ತೆ– ಇಂದಿರಾನಗರದ ನಡುವೆ ಎರಡು ದಿನ ಮೆಟ್ರೊ ಸಂಚಾರ ಸ್ಥಗಿತಗೊಳಿಸಬೇಕಾಯಿತು.
ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಮೆಟ್ರೊ ರೈಲುಗಳು ಮಾರ್ಗ ಮಧ್ಯೆಯೇ ದಿಢೀರ್ ಸ್ಥಗಿತಗೊಂಡ ಪ್ರಕರಣಗಳು ವರ್ಷದಲ್ಲಿ ನಾಲ್ಕು ಬಾರಿ ಮರುಕಳಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.