ADVERTISEMENT

ಬೆಂಗಳೂರು: ಬಿದಿರು ಅಲಂಕಾರದಲ್ಲಿ ಮೆಟ್ರೊ ನಿಲ್ದಾಣ

ಆಕರ್ಷಣೆಯ ಕೇಂದ್ರವಾಗಲಿರುವ ಬಂಬೂಬಜಾರ್‌ ಸ್ಟೇಷನ್‌

ಬಾಲಕೃಷ್ಣ ಪಿ.ಎಚ್‌
Published 19 ಜುಲೈ 2024, 3:58 IST
Last Updated 19 ಜುಲೈ 2024, 3:58 IST
ನಮ್ಮ ಮೆಟ್ರೊ ಗುಲಾಬಿ ಮಾರ್ಗ
ನಮ್ಮ ಮೆಟ್ರೊ ಗುಲಾಬಿ ಮಾರ್ಗ   

ಬೆಂಗಳೂರು: ನಮ್ಮ ಮೆಟ್ರೊ ಕಾಳೇನ ಅಗ್ರಹಾರ–ನಾಗವಾರ ಮಾರ್ಗದಲ್ಲಿ ಬಂಬೂಬಜಾರ್‌ ಸಮೀಪದ ನಿಲ್ದಾಣವನ್ನು (ಪಾಟರಿ ಟೌನ್‌) ಬಿದಿರಿನ ಅಲಂಕಾರದಲ್ಲಿ ನಿರ್ಮಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ.

ಬಿದಿರು ಸೊಸೈಟಿ ಆಫ್‌ ಇಂಡಿಯಾ ಸಲ್ಲಿಸಿದ ಪ್ರಸ್ತಾವವನ್ನು ಸ್ವೀಕರಿಸಿರುವ ಬಿಎಂಆರ್‌ಸಿಎಲ್‌, ಪ್ರಯಾಣಿಕರ ಸುರಕ್ಷತೆ ಕಾಪಾಡಿಕೊಂಡು, ಬೆಂಕಿ ಅನಾಹುತ ಉಂಟಾಗದಂತೆ ನೋಡಿಕೊಂಡು ಯೋಜನೆ ರೂಪಿಸಲು ಮುಂದಾಗಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ದೇಶದ ಮೊದಲ ಬಿದಿರು ಅಲಂಕಾರದ ಮೆಟ್ರೊ ನಿಲ್ದಾಣವಾಗಲಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2ರಲ್ಲಿ ಬಿದಿರು ಬಳಸಿ ಒಳಾಂಗಣ ವಿನ್ಯಾಸವನ್ನು ಆಕರ್ಷಕಗೊಳಿಸಲಾಗಿದೆ. ದೆಹಲಿಯಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್ತಿನ ಗೋಡೆ ಮತ್ತು ನೆಲಹಾಸುಗಳಿಗೆ ಬಿದಿರು ಬಳಸಲಾಗಿದೆ. ಇದೇ ರೀತಿ ಮೆಟ್ರೊ ನಿಲ್ದಾಣ ಒಳವಿನ್ಯಾಸವನ್ನು ಬಿದಿರಿನಿಂದ ಮಾಡಬೇಕು. ಉತ್ತಮ ಪ್ರಭೇದವಾದ ‘ತ್ರಿಪುರನ್‌ ಬಂಬುಸಾ ತುಲ್ಡಾ’ ಬಿದಿರು ಬಳಸಿದರೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ಬಿದಿರು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿ ಭಾರತವಿದ್ದು, ಇಲ್ಲಿನ ಬಿದಿರಿಗೆ ಈ ಯೋಜನೆಯ ಮೂಲಕ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ‘ಬಿದಿರು ಸೊಸೈಟಿ ಆಫ್‌ ಇಂಡಿಯಾ’ (ಬಿಎಸ್‌ಐ) ಅಧ್ಯಕ್ಷ ಪುನತಿ ಶ್ರೀಧರ್‌ ಸಲ್ಲಿಸಿದ್ದ ಪ್ರಸ್ತಾವದಲ್ಲಿ ತಿಳಿಸಿದ್ದರು.

ADVERTISEMENT

‘ಬಿಎಸ್‌ಐ ಪ್ರಸ್ತಾವ ಸಲ್ಲಿಸಿದೆ. ಈ ಬಗ್ಗೆ ನಮ್ಮ ಮೆಟ್ರೊ ಮುಖ್ಯ ವಾಸ್ತುಶಿಲ್ಪಿಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ. ಪಾಟರಿ ಟೌನ್‌ ನಿಲ್ದಾಣವು ಭೂಗತ ನಿಲ್ದಾಣವಾಗಿರುವುದರಿಂದ ಒಳವಿನ್ಯಾಸಕ್ಕೆ ಬಿದಿರು ಬಳಸುವುದು ಕಷ್ಟ. ಆದರೆ, ಪ್ರವೇಶ ಪ್ರದೇಶದಲ್ಲಿ ಬಿದಿರು ವಿನ್ಯಾಸ ಮಾಡಬಹುದು. ಸಾಧಕ–ಬಾಧಕಗಳ ಬಗ್ಗೆ ಚರ್ಚೆಯಾದ ಮೇಲೆ ಸುರಕ್ಷಿತವಾಗಿ ಹೇಗೆ ಬಳಸಬಹುದು ಎಂದು ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ನಮ್ಮ ಮೆಟ್ರೊ ಗುಲಾಬಿ ಮಾರ್ಗದ ಮುಖ್ಯ ಎಂಜಿನಿಯರ್‌ ದಯಾನಂದ ಶೆಟ್ಟಿ ಮಾಹಿತಿ ನೀಡಿದರು.

ಬನ್ನೇರುಘಟ್ಟ ರಸ್ತೆಯಲ್ಲಿ ಜಯದೇವ ಆಸ್ಪತ್ರೆಯಿಂದ ಮುಂದಕ್ಕೆ ಮೀನಾಕ್ಷಿ ದೇವಸ್ಥಾನದವರೆಗೆ ಮೆಟ್ರೊ ಮಾರ್ಗದ ಅಡಿಯಲ್ಲಿ ಬಿದಿರು ಬೆಳೆಸಬೇಕು. ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ನಿಧಿಯನ್ನು (ಸಿಎಸ್‌ಆರ್‌ ಫಂಡ್‌) ಬಳಸಿ ಬಿದಿರು ಬೆಳೆಸಿ ಹಸಿರು ಪರಿಸರ ಸೃಷ್ಟಿಸಬಹುದು ಎಂಬ ಪ್ರಸ್ತಾವ ಕೂಡ ಬಿಎಸ್‌ಐ ಇಟ್ಟಿದೆ. ಈ ಬಗ್ಗೆ  ಬಿಎಂಆರ್‌ಸಿಎಲ್‌ ಆಡಳಿತ ಮಂಡಳಿಯು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವಾಣ್‌ ತಿಳಿಸಿದರು.

2025ರ ಡಿಸೆಂಬರ್‌ ಒಳಗೆ ಕಾಳೇನ ಅಗ್ರಹಾರ–ನಾಗವಾರ (ಗುಲಾಬಿ) ಮಾರ್ಗ ಸಾರ್ವಜನಿಕರಿಗೆ ತೆರೆದುಕೊಳ್ಳಲಿದ್ದು, ಬಿದಿರು ಅಲಂಕಾರದ ನಿಲ್ದಾಣ ನಿರ್ಮಾಣಗೊಂಡರೆ ಅದು ಆಕರ್ಷಣೆಯ ಕೇಂದ್ರವಾಗಲಿದೆ ಎಂಬುದು ಬಿದಿರು ಪ್ರೇಮಿ ನಂದಿನಿ ಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಗುಲಾಬಿ ಮಾರ್ಗ

₹ 6 ಕೋಟಿ ಬಿದಿರು ಒಳವಿನ್ಯಾಸದ ನಿಲ್ದಾಣ ನಿರ್ಮಾಣದ ಅಂದಾಜು ವೆಚ್ಚ 5 ಕಿ.ಮೀ. ಮೆಟ್ರೊ ಟ್ರ್ಯಾಕ್‌ಗಳ ಅಡಿಯಲ್ಲಿ ಬಿದಿರು ಬೆಳೆಸುವ ಪ್ರಸ್ತಾವ 136 ಭಾರತದಲ್ಲಿರುವ ಬಿದಿರು ಪ್ರಭೇದ 40 ಕರ್ನಾಟಕದಲ್ಲಿರುವ ಬಿದಿರು ಪ್ರಭೇದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.