ADVERTISEMENT

ನಮ್ಮ ಮೆಟ್ರೊ: ಹೊಸ ಮಾರ್ಗಗಳಲ್ಲಿ ಚಾಲಕ ರಹಿತ ವ್ಯವಸ್ಥೆ

ಕೆ.ಆರ್.ಪುರ–ವಿಮಾನ ನಿಲ್ದಾಣ ಮಾರ್ಗದ ಭೂಸ್ವಾಧೀನ ಕಾರ್ಯ ಪೂರ್ಣ

ಗುರು ಪಿ.ಎಸ್‌
Published 25 ಆಗಸ್ಟ್ 2020, 20:52 IST
Last Updated 25 ಆಗಸ್ಟ್ 2020, 20:52 IST
   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿನ ಕೆ.ಆರ್. ಪುರ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಭವಿಷ್ಯದಲ್ಲಿ ಈ ಮಾರ್ಗವೂ ಸೇರಿದಂತೆ ಎಲ್ಲ ಹೊಸ ಮಾರ್ಗದಲ್ಲಿ ಚಾಲಕ ರಹಿತ ವ್ಯವಸ್ಥೆ ಅಳವಡಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

‘ಕೆ.ಆರ್.ಪುರದಿಂದ –ವಿಮಾನ ನಿಲ್ದಾಣ (2ಬಿ) ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ನಿರ್ಮಾಣಕ್ಕಾಗಿ ಹೆಚ್ಚುವರಿ ಜಾಗ ಬೇಕಾಗಿತ್ತು. ಇದಕ್ಕಾಗಿ 9,424 ಚ.ಮೀ. ನಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲು ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ಇದು ಪೂರ್ಣವಾದರೆ, ಈ ಮಾರ್ಗದಲ್ಲಿನ ಭೂಸ್ವಾಧೀನ ಕಾರ್ಯ ಮುಕ್ತಾಯವಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ನ ಭೂಸ್ವಾಧೀನ ವಿಭಾಗದ ಪ್ರಧಾನ ವ್ಯವಸ್ಥಾಪಕ ಚೆನ್ನಪ್ಪಗೌಡರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್. ಪುರ (2ಎ) ಮಾರ್ಗದ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. 2ಬಿಯಲ್ಲಿಈವರೆಗೆ 238 ಕಟ್ಟಡಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಕಟ್ಟಡ ಮಾಲೀಕರಿಗೆ ₹200 ಕೋಟಿಯವರೆಗೆ ಪರಿಹಾರ ನೀಡಲಾಗಿದ್ದು, ಎನ್‌ಎಚ್‌ಎಐಗೂ ₹340 ಕೋಟಿ ಪರಿಹಾರ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ADVERTISEMENT

ಈಗ 2ಎ ಮಾರ್ಗದ ಸಿವಿಲ್‌ ಕಾಮಗಾರಿಗಳಿಗಾಗಿ ಟೆಂಡರ್‌ ಕರೆಯಲಾಗಿದ್ದು, ಅವುಗಳ ಮೌಲ್ಯಮಾಪನ ಕಾರ್ಯಪ್ರಗತಿಯಲ್ಲಿದೆ. 2ಬಿ ಮಾರ್ಗದ ಕಾಮಗಾರಿಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಚಾಲಕ ರಹಿತ ವ್ಯವಸ್ಥೆ: ಎರಡನೇ ಹಂತದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮಾರ್ಗಗಳಲ್ಲಿ ಸಿಗ್ನಲಿಂಗ್‌ ವ್ಯವಸ್ಥೆ ಬದಲಾಗಲಿದೆ. ಸದ್ಯ, ಡಿಟಿಜಿ (ಡಿಸ್ಟೇನ್ಸ್‌ ಟು ಗೊ) ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಮುಂದೆ, ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಟಿಬಿಸಿ) ಅಳವಡಿಸಲಾಗುತ್ತದೆ.

‘ಇದು ಚಾಲಕರಹಿತ ವ್ಯವಸ್ಥೆ. ತ್ವರಿತ ರೈಲು ಸಂಚಾರ ಇದರಿಂದ ಸಾಧ್ಯವಾಗಲಿದೆ. ದಟ್ಟಣೆಯ ಅವಧಿಯಲ್ಲಿ ನಾಲ್ಕು ನಿಮಿಷಕ್ಕೊಂದು, ಉಳಿದ ಸಂದರ್ಭದಲ್ಲಿ 7ರಿಂದ 8 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ಸದ್ಯ, ಡಿಟಿಜಿವ್ಯವಸ್ಥೆ ಆಧಾರದಲ್ಲಿಯೇ ಕಾರ್ಯನಿರ್ವಹಿಸಲಿರುವ ಬೈಯಪ್ಪನಹಳ್ಳಿ ಡಿಪೊ ಮುಂದೆ ಸಿಟಿಬಿಸಿ ವ್ಯವಸ್ಥೆ ಅಳವಡಿಸಿಕೊಳ್ಳಲಿದೆ. ನೇರಳೆ ಮಾರ್ಗದ ರೈಲುಗಳ ಬದಲಾಗಿ, ನೀಲಿ ಮಾರ್ಗದ ರೈಲುಗಳು (2ಎ ಮತ್ತು 2ಬಿ) ಈ ಡಿಪೊದಿಂದ ಕಾರ್ಯಾಚರಣೆ ನಡೆಸಲಿವೆ.

ಕೆ.ಆರ್.ಪುರ ಮೆಟ್ರೊ ನಿಲ್ದಾಣದಿಂದ 2.5 ಕಿ.ಮೀ. ಪಾರ್ಶ್ವ ಮಾರ್ಗ ನಿರ್ಮಾಣವಾಗಲಿದ್ದು,
ಬೈಯಪ್ಪನಹಳ್ಳಿ ಡಿಪೊವನ್ನು ಸಂಪರ್ಕಿಸಲಿದೆ. ಆ ಮೂಲಕ ಹೊಸದಾಗಿ ನಿರ್ಮಾಣವಾಗಲಿರುವ ಮಾರ್ಗದ ರೈಲುಗಳೂ ಈ ಡಿಪೊವನ್ನು ಬಳಸಬಹುದಾಗಿದೆ. ಇದರಿಂದ ಹೊಸ ಮೆಟ್ರೊ ನಿಲ್ದಾಣ ಮತ್ತು ಡಿಪೊ ನಿರ್ಮಾಣದ ವೆಚ್ಚ ಉಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.