ಬೆಂಗಳೂರು: ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಕಾಮಗಾರಿಗಾಗಿ ಐದು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕಾಮರಾಜ್ ರಸ್ತೆಯ ಒಂದು ಭಾಗ ಶುಕ್ರವಾರ ಸಂಚಾರಕ್ಕೆ ತೆರೆದುಕೊಂಡಿದೆ.
ಅನಿಲ್ ಕುಂಬ್ಳೆ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಕಾವೇರಿ ಎಂಪೋರಿಯಂ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಕಾಮರಾಜ ರಸ್ತೆಯಲ್ಲಿ ಸಂಚರಿಸಿ ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ನೇರವಾಗಿ ಸಾಗಿ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಸಾಗಬಹುದು. ಕಬ್ಬನ್ ರಸ್ತೆಯ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಿಆರ್‌ವಿ ಕಡೆಗೆ ಹಾಗೂ ಬಲ ತಿರುವು ಪಡೆದು ಹಲಸೂರು ಕಡೆಗೆ ವಾಹನಗಳು ಸಂಚರಿಸಬಹುದು.
ಎಂ.ಜಿ. ರಸ್ತೆಯ ಮೆಯೋಹಾಲ್ ಜಂಕ್ಷನ್ ಕಡೆಯಿಂದ ಬರುವ ವಾಹನಗಳು ಕಾವೇರಿ ಎಂಪೋರಿಯಂ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆಯಲ್ಲಿ ಸಂಚರಿಸಿ ಕಬ್ಬನ್ ರಸ್ತೆ ಜಂಕ್ಷನ್‌ನಲ್ಲಿ ನೇರವಾಗಿ ಸಾಗಿ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ ಸಾಗಬಹುದು. ಕಬ್ಬನ್ ರಸ್ತೆಯ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬಿಆರ್‌ವಿ ಕಡೆಗೆ ಹಾಗೂ ಬಲ ತಿರುವು ಪಡೆದು ಮಣಿಪಾಲ್ ಸೆಂಟರ್ ಕಡೆಗೆ ವಾಹನಗಳು ಸಂಚರಿಸಬಹುದು ಎಂದು ಅಶೋಕನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಐದು ವರ್ಷ ಬಂದ್: ನಾಗವಾರ–ಕಾಳೇನ ಅಗ್ರಹಾರ ಮೆಟ್ರೊ ಮಾರ್ಗದಲ್ಲಿ ಕಾವೇರಿ ಎಂಪೊರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಇಂಟರ್‌ಚೇಂಜ್ ಎಂ.ಜಿ. ರಸ್ತೆ ಮೆಟ್ರೊ ಭೂಗತ ನಿಲ್ದಾಣ ನಿರ್ಮಿಸಲು ಕಾಮರಾಜ್ ರಸ್ತೆಯನ್ನು 2019ರಲ್ಲಿ ಬಿಎಂಆರ್‌ಸಿಎಲ್ ಮುಚ್ಚಿತ್ತು. ಭೂಮಿ ಹಸ್ತಾಂತರ, ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ತುಂಬಾ ನಿಧಾನವಾಗಿ ಸಾಗಿತ್ತು. ಮಧ್ಯೆ ಕೋವಿಡ್ ಬಿಕ್ಕಟ್ಟು ಕೂಡಾ ವಿಳಂಬಕ್ಕೆ ಕಾರಣವಾಯಿತು.
ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಕಾಮರಾಜ್ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಯಂತ್ರೋಪಕರಣಗಳ ಸಾಗಾಟಕ್ಕಾಗಿ ಇನ್ನೊಂದು ಬದಿಯ ರಸ್ತೆ ಬಳಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.