ADVERTISEMENT

Namma Metro | ಕಾಳೇನ ಅಗ್ರಹಾರ–ನಾಗವಾರ ಮಾರ್ಗ: 2025ರ ಮಾರ್ಚ್‌ಗೆ ಪೂರ್ಣ

ನಾಗಸಂದ್ರ–ಮಾದವಾರ ಹಾಗೂ ಆರ್‌.ವಿ.ರಸ್ತೆ–ಬೊಮ್ಮಸಂದ್ರ ಮುಂದಿನ ಏಪ್ರಿಲ್‌ಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2023, 0:30 IST
Last Updated 21 ಅಕ್ಟೋಬರ್ 2023, 0:30 IST
ನಮ್ಮ ಮೆಟ್ರೊದ ವಿಸ್ತರಿತ ಮಾರ್ಗದ ಉದ್ಘಾಟನೆ ಕಾರ್ಯಕ್ರಮಕ್ಕೆ ವರ್ಚುವಲ್‌ನಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.
ನಮ್ಮ ಮೆಟ್ರೊದ ವಿಸ್ತರಿತ ಮಾರ್ಗದ ಉದ್ಘಾಟನೆ ಕಾರ್ಯಕ್ರಮಕ್ಕೆ ವರ್ಚುವಲ್‌ನಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.   

ಬೆಂಗಳೂರು: ‘ನಮ್ಮ ಮೆಟ್ರೊ’ದ ನೇರಳೆ ಮಾರ್ಗದಲ್ಲಿ ಕೆ.ಆರ್‌.ಪುರದಿಂದ ಬೈಯಪ್ಪನಹಳ್ಳಿವರೆಗೆ 2.10 ಕಿ.ಮೀ ಹಾಗೂ ಕೆಂಗೇರಿ– ಚಲ್ಲಘಟ್ಟದವರೆ 2.5 ಕಿ.ಮೀ ವಿಸ್ತರಿತ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಾಹಿಬಾಬಾದ್‌ನಿಂದ ವರ್ಚುವಲ್‌ ಮೂಲಕ ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಿದರು.

ಬೆಂಗಳೂರಿನಿಂದ ವರ್ಚುವಲ್‌ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ನಮ್ಮ ಮೆಟ್ರೊ’ದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಸಹ ಪಾಲ್ಗೊಂಡಿದ್ದರು.

ವಿಸ್ತರಿತ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾಯಲಾಗುತ್ತಿತ್ತು. ಆದರೆ, ಮೆಟ್ರೊ ಪ್ರಯಾಣಿಕರ ಒತ್ತಡ ಹೆಚ್ಚಿದ ಮೇಲೆ ಅ.9ರಂದು ಉದ್ಘಾಟನೆಯಿಲ್ಲದೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಂಡಿತ್ತು. ಈಗ ಅಧಿಕೃತವಾಗಿ ಉದ್ಘಾಟನೆಗೊಂಡಿದೆ.

ADVERTISEMENT

ಸಿದ್ದರಾಮಯ್ಯ ಮಾತನಾಡಿ, ‘ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ‘ನಮ್ಮ ಮೆಟ್ರೊ’ ಸೇವೆ ವಿಸ್ತರಣೆ ಅಗತ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಂತಹಂತವಾಗಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಸದ್ಯ ಈಗ ಹಸಿರು ಹಾಗೂ ನೇರಳೆ ಮಾರ್ಗದಲ್ಲಿ ತಡೆರಹಿತ ಸಂಪರ್ಕವಿದೆ. ಮೆಟ್ರೊ ಜಾಲವು ಸದ್ಯ 74 ಕಿ.ಮೀಗೆ ವಿಸ್ತರಣೆಗೊಂಡಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೆಟ್ರೊ ಹಂತ–2 ಯೋಜನೆಗೆ ರಾಜ್ಯ ಸರ್ಕಾರವು ₹ 11,583 ಕೋಟಿ ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು.

‘ನಾಗಸಂದ್ರದಿಂದ ಮಾದವಾರದವರೆಗೆ ಉತ್ತರ ವಿಸ್ತರಣೆ ಮಾರ್ಗ (3.14 ಕಿ.ಮೀ) ಹಾಗೂ ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ (19.15 ಕಿ.ಮೀ) ಹೊಸ ಮಾರ್ಗದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಏಪ್ರಿಲ್‌ ವೇಳೆಗೆ ಉದ್ಘಾಟನೆಗೊಳ್ಳಲಿವೆ’ ಎಂದು ಹೇಳಿದರು.

‘ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿ.ಮೀ. ಉದ್ದದ ಹೊಸ ಮಾರ್ಗವನ್ನು ಮಾರ್ಚ್‌ 2025ರ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗ ಪೂರ್ಣಗೊಂಡರೆ ಕಾರ್ಯಾಚರಣೆ ಜಾಲವು 117 ಕಿ.ಮೀಗೆ ವಿಸ್ತರಣೆಗೊಳ್ಳಲಿದೆ. 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಹಂತ–1ರ 42.3 ಕಿ.ಮೀ ಉದ್ದದ ಮಾರ್ಗಕ್ಕೆ ₹14,133 ಕೋಟಿ ವೆಚ್ಚವಾಗಿತ್ತು. ಅದು ನಮ್ಮ ಸರ್ಕಾರವಿದ್ದ ಅವಧಿಯಲ್ಲೇ ಉದ್ಘಾಟನೆಗೊಂಡಿತ್ತು. ಆಗ ರಾಜ್ಯ ಸರ್ಕಾರವು ₹ 5,630 ಕೋಟಿ ವೆಚ್ಚ ಮಾಡಿತ್ತು’ ಎಂದು ಮಾಹಿತಿ ನೀಡಿದರು.

ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೊ. 

ಹೊಸ ಯೋಜನೆ: ಅನುಮೋದನೆ ನೀಡಲು ಪ್ರಧಾನಿಗೆ ಮನವಿ

ಮೆಟ್ರೊ ವಿಸ್ತರಣೆ ಮಾಡುವಂತೆ ಬೇಡಿಕೆ ಹೆಚ್ಚುತ್ತಿದೆ. 3ನೇ ಹಂತದಲ್ಲಿ 45 ಕಿ.ಮೀ ಮಾರ್ಗವನ್ನು ₹ 15611 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರ್ಕಾರವು ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಅನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿ ಅದಕ್ಕೆ ಶೀಘ್ರವೇ ಅನುಮೋದನೆ ನೀಡುವಂತೆ ಪ್ರಧಾನಿಯವರನ್ನು ಕೋರಿದರು. ‘ಸರ್ಜಾಪುರದಿಂದ ಹೆಬ್ಬಾಳದವರೆಗೆ 37 ಕಿ.ಮೀ ಉದ್ದದ ಹಂತ-3ಎ ಯೋಜನೆಗೆ ಡಿಪಿಆರ್‌ ತಯಾರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೆಬ್ಬಾಳ ಜಂಕ್ಷನ್‌: 2026ಕ್ಕೆ ಕಾಮಗಾರಿ ಪೂರ್ಣ

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (58 ಕಿ.ಮೀ) ಹಂತ 2ಎ ಮತ್ತು 2ಬಿ ಯೋಜನೆಗೆ ₹ 14788 ಕೋಟಿ ವೆಚ್ಚವಾಗುತ್ತಿದೆ. ಈ ಕಾಮಗಾರಿಯನ್ನು 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ‘ಈ ಯೋಜನೆಗೆ ರಾಜ್ಯ ಸರ್ಕಾರವೇ ಇದುವರೆಗೆ ₹ 4775 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆ ಪೂರ್ಣಗೊಂಡ ನಂತರ ಮೆಟ್ರೊ ಜಾಲವು 176 ಕಿ.ಮೀಗೆ ವಿಸ್ತರಣೆ ಆಗಲಿದೆ. ಆಗ ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಮೆಟ್ರೊ ಸಂಚಾರ ಆರಂಭವಾಗಿ 12 ವರ್ಷ

ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೊ’ ಸೇವೆ ಆರಂಭವಾಗಿ 12 ವರ್ಷ ಕಳೆದಿದೆ. ಎಂ.ಜಿ.ರಸ್ತೆ–ಬೈಯಪ್ಪನಹಳ್ಳಿ ನಡುವೆ (6.7 ಕಿ.ಮೀ) ಮೊದಲ ಮೆಟ್ರೊ ಸಂಚಾರ ಆರಂಭಗೊಂಡಿತ್ತು. ಆರಂಭಿಕ ದಿನಗಳಲ್ಲಿ ಪ್ರತಿನಿತ್ಯ 20 ಸಾವಿರ ಪ್ರಯಾಣಿಕರು ಸಂಚರಿಸುತ್ತಿದ್ದರು. ಈಗ ಅದು ಏಳು ಲಕ್ಷಕ್ಕೆ ತಲುಪಿದೆ. ಎಂಜಿ ರಸ್ತೆ– ಬೈಯಪ್ಪನಹಳ್ಳಿ ನಡುವೆ 2011ರ ಅಕ್ಟೋಬರ್‌ 20ರಂದು ಮೆಟ್ರೊ ಸೇವೆ ಆರಂಭವಾದ ಸಂದರ್ಭ ದಲ್ಲಿ ನಗರದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 45.5 ಲಕ್ಷವಿತ್ತು. ಈಗ ವಾಹನ ಸಂಖ್ಯೆ 1 ಕೋಟಿ ಮೀರಿದೆ. ಇದರಿಂದ ವಾಹನ ದಟ್ಟಣೆ ತೀವ್ರವಾಗಿದೆ. ಮೆಟ್ರೊ ಪ್ರಯಾಣಿಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಮೆಟ್ರೊ ವಿಸ್ತರಣೆ ಕಾಮಗಾರಿ ವೇಗ ಪಡೆಯುತ್ತಿಲ್ಲ ಎಂಬ ಆರೋಪವಿದೆ. ಸದ್ಯ ಮೆಟ್ರೊ ಜಾಲವು 74 ಕಿ.ಮೀ ಇದೆ. ವರ್ಷಕ್ಕೆ ಕೇವಲ 6.16 ಕಿ.ಮೀ ಅಷ್ಟೇ ಕಾಮಗಾರಿ ನಡೆಸಲಾಗಿದೆ ಎಂದು ಪ್ರಯಾಣಿಕರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.