ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಸೂಚನೆ ಸ್ವೀಕರಿಸಲು ನೀಡಿದ್ದ ಅವಧಿಯನ್ನು ಅ.28ರವರೆಗೆ ಬಿಎಂಆರ್‌ಸಿಎಲ್ ವಿಸ್ತರಿಸಿದೆ.
ದರ ಪರಿಷ್ಕರಣೆಗಾಗಿ ದರ ನಿಗದಿ ಸಮಿತಿ ರಚನೆಯಾಗಿದ್ದು, ನಾಗರಿಕರು ಸಲಹೆಗಳನ್ನು ಅ.21ರ ಒಳಗೆ ffc@bmrc.co.inಗೆ ಇ–ಮೇಲ್ ಮೂಲಕ ಸಲ್ಲಿಸಬಹುದು ಅಥವಾ ಅಧ್ಯಕ್ಷರು, ದರ ನಿಗದಿ ಸಮಿತಿ, ನಮ್ಮ ಮೆಟ್ರೊ, 3ನೇ ಮಹಡಿ, 'ಸಿ' ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು-560027 ಇಲ್ಲಿಗೆ ಲಿಖಿತವಾಗಿ ಕಳುಹಿಸಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಇಲ್ಲಿವರೆಗೆ 2 ಸಾವಿರಕ್ಕೂ ಅಧಿಕ ಜನರು ಸಲಹೆಗಳನ್ನು ನೀಡಿದ್ದರು. ಸಾರ್ವಜನಿಕರಿಗೆ ಇನ್ನಷ್ಟು ಅವಕಾಶ ನೀಡಲು ಸಮಿತಿ ನಿರ್ಧರಿಸಿರುವುದರಿಂದ ಒಂದು ವಾರ ಅವಧಿ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರ ರಚಿಸಿದ ಬಿಎಂಆರ್‌ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿದೆ.
ಪ್ರಯಾಣಿಕರು, ಸಂಘ ಸಂಸ್ಥೆಗಳು, ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸಮಿತಿಯು ದರ ನಿಗದಿ ಮಾಡಲಿದೆ. ಬಳಿಕ ಬಿಎಂಆರ್‌ಸಿಎಲ್ ದರ ಪರಿಕ್ಷರಣೆಗೆ ರಾಜ್ಯ ಸರ್ಕಾರ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸುತ್ತದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ ಮೇಲೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಎಲ್ಲ ಹಂತದಲ್ಲಿ ಅನುಮತಿ ಪಡೆದ ಬಳಿಕ ದರ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.