ADVERTISEMENT

ಬಂತು ‘ನಮ್ಮ ಮೆಟ್ರೊ– ಒನ್‌ ನೇಷನ್‌ ಒನ್‌ ಕಾರ್ಡ್‌’

ಕೆವೈಸಿ ಇಲ್ಲದೆ ಡೆಬಿಟ್‌ ಕಾರ್ಡ್‌ನಂತೆಯೂ ಬಳಸಬಹುದು* ಮೆಟ್ರೊ ಪ್ರಯಾಣಕ್ಕೂ ಇದೇ ಆದೀತು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 0:30 IST
Last Updated 3 ಮಾರ್ಚ್ 2024, 0:30 IST
<div class="paragraphs"><p>ನಮ್ಮ ಮೆಟ್ರೊ ಕಾರ್ಡ್‌</p></div>

ನಮ್ಮ ಮೆಟ್ರೊ ಕಾರ್ಡ್‌

   

ಬೆಂಗಳೂರು: ನಮ್ಮ ಮೆಟ್ರೊದಲ್ಲಿ ಪ್ರಯಾಣಿಸುವ ಸೌಲಭ್ಯದೊಂದಿಗೆ, ಡೆಬಿಟ್‌ ಕಾರ್ಡ್‌ನಂತೆ ವಾಣಿಜ್ಯ ಮಳಿಗೆಗಳಲ್ಲೂ ಉಪಯೋಗಿಸಬಹುದಾದ ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಅನ್ನು  ಪರಿಚಯಿಸಲಾಗಿದೆ.

ಆರ್‌ಬಿಎಲ್‌ ಬ್ಯಾಂಕ್‌ನ ಸಹಯೋಗದಲ್ಲಿ ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜಿ ಕಾರ್ಡ್‌ ಅನ್ನು ಸಿದ್ಧಪಡಿಸಿದ್ದು, ನಮ್ಮ ಮೆಟ್ರೊದ ಕೌಂಟರ್‌ನಲ್ಲಿ ಕಾರ್ಡ್‌ಗಳನ್ನು ಖರೀದಿಸಬಹುದಾಗಿದೆ. ಮೆಟ್ರೊ ಕೌಂಟರ್‌ ಸೇರಿದಂತೆ ಆನ್‌ಲೈನ್‌, ನೆಟ್‌ ಬ್ಯಾಂಕಿಂಗ್‌ ಹಾಗೂ ವ್ಯಾಲೆಟ್‌ಗಳಿಂದಲೂ ಈ ಕಾರ್ಡ್‌ಗೆ ಹಣವನ್ನು ಟಾಪ್‌ ಅಪ್ ಮಾಡಿಕೊಳ್ಳಬಹುದು.

ADVERTISEMENT

‘ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಈ ಕಾರ್ಡ್‌ ಬಳಸುವ ಜೊತೆಗೆ, ಚೆನ್ನೈ, ದೆಹಲಿ ಮೆಟ್ರೊಗಳಲ್ಲೂ ಬಳಸಬಹುದಾಗಿದೆ. ಕೆವೈಸಿ ಸಲ್ಲಿಸದೆ ಹೆಸರು ಹಾಗೂ ಮೊಬೈಲ್‌ ಸಂಖ್ಯೆ ನೀಡುವ ಮೂಲಕ ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಪಡೆಯಬಹುದು. ಆಗ ಅದನ್ನು ಮೆಟ್ರೊದಲ್ಲಿ ಮಾತ್ರ ಉಪಯೋಗಿಸಬಹುದು. ಡೆಬಿಟ್‌ ಕಾರ್ಡ್‌ನಂತೆ ಎಲ್ಲೆಡೆ ಬಳಸುವ ಮೊದಲು ಕೆವೈಸಿಯನ್ನು ಆನ್‌ಲೈನ್‌ ಅಥವಾ ‘BMRCL RBLBankNCMC’ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬಹುದು’ ಎಂದು ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜಿಯ ಡಿಜಿಟಲ್‌ ವ್ಯವಹಾರದ ಕಾರ್ಯಕಾರಿ ಉಪಾಧ್ಯಕ್ಷ ಅಲೋಕ್‌ ಸಿಂಗ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆವೈಸಿ ಇಲ್ಲದೆ ಸಾರಿಗೆ ವ್ಯವಸ್ಥೆಗಳಲ್ಲಿ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಒದಗಿಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸುತ್ತೋಲೆ ಹೊರಡಿಸಿದೆ. ಹೀಗಾಗಿ ಈ ಮೊದಲು ಕೆವೈಸಿ ಇಲ್ಲದೆ ನಮ್ಮ ಮೆಟ್ರೊದಲ್ಲಿ ಈ ಕಾರ್ಡ್‌ ಲಭ್ಯ ಇರುತ್ತಿರಲಿಲ್ಲ. ಈಗ ಸುಲಭವಾಗಿ ಪಡೆಯಬಹುದಾಗಿದೆ. ಹಣವನ್ನು ಟಾಪ್‌ಅಪ್‌ ಮಾಡಿಕೊಂಡು ಅದರಲ್ಲಿ ಎಷ್ಟು ಅಗತ್ಯವೋ ಅಷ್ಟನ್ನು ನಮ್ಮ ಮೆಟ್ರೊ ಪ್ರಯಾಣದ ಸೌಲಭ್ಯಕ್ಕೆ ವರ್ಗಾಯಿಸಿಕೊಳ್ಳಬಹುದು. ಉಳಿದ ಹಣವನ್ನು ಡೆಬಿಟ್‌ ಕಾರ್ಡ್‌ ಆಗಿ ಎಲ್ಲೆಡೆಯೂ ಬಳಸಿಕೊಳ್ಳಬಹುದು. ಮೆಟ್ರೊ ಬಳಕೆಯಲ್ಲಿ ₹50 ಠೇವಣಿಯಾಗಿ ಉಳಿದುಕೊಳ್ಳಲಿದೆ. ಆರ್‌ಬಿಎಲ್‌ ಬ್ಯಾಂಕ್‌ ಖಾತೆಯನ್ನು ಸಂಪೂರ್ಣವಾಗಿ ನಿರ್ವಹಿಸಲಿದ್ದು, ನಮ್ಮ ಮೆಟ್ರೊದೊಂದಿಗೆ ಎಲ್ಲ ಒಪ್ಪಂದಗಳನ್ನು ಮಾಡಿಕೊಂಡಿದೆ. ಎಜಿಎಸ್‌ ಟ್ರಾನ್ಸಾಕ್ಟ್‌ ಟೆಕ್ನಾಲಜಿ ವತಿಯಿಂದ ಬ್ಯಾಕ್‌ ಹ್ಯಾಂಡ್‌ ಸೇರಿದಂತೆ ಎಲ್ಲ ರೀತಿಯ ತಂತ್ರಜ್ಞಾನವನ್ನು ಒದಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಮ್ಮ ಮೆಟ್ರೊದ ಸುಮಾರು 40 ಸಾವಿರ ಪ್ರಯಾಣಿಕರು ಈವರೆಗೆ ಈ ಕಾರ್ಡ್‌ ಅನ್ನು ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ  ‘ಒನ್‌ ನೇಷನ್‌ ಒನ್‌ ಕಾರ್ಡ್‌’ ಮಾತ್ರ ಚಾಲ್ತಿಯಲ್ಲಿರುವುದರಿಂದ ಎರಡು ವರ್ಷಗಳಲ್ಲಿ ಬೆಂಳೂರಿನಲ್ಲಿ ಸುಮಾರು 2 ಲಕ್ಷ ಕಾರ್ಡ್‌ ಹಾಗೂ ದೇಶದಾದ್ಯಂತ 25 ಲಕ್ಷ ಕಾರ್ಡ್‌ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.