ADVERTISEMENT

ನಮ್ಮ ಮೆಟ್ರೊ ‘ಹಳದಿ’ ಮಾರ್ಗ: 3.5 ಲಕ್ಷ ಪ್ರಯಾಣಿಕರಿಗೆ ಅನುಕೂಲ

ಜನವರಿಯಲ್ಲಿ ಆರಂಭವಾಗಲಿದೆ ರಾಷ್ಟ್ರೀಯ ವಿದ್ಯಾಲಯ–ಬೊಮ್ಮಸಂದ್ರ ‘ನಮ್ಮ ಮೆಟ್ರೊ’

ಬಾಲಕೃಷ್ಣ ಪಿ.ಎಚ್‌
Published 11 ನವೆಂಬರ್ 2024, 23:30 IST
Last Updated 11 ನವೆಂಬರ್ 2024, 23:30 IST
   

ಬೆಂಗಳೂರು: ಎಲೆಕ್ಟ್ರಾನಿಕ್‌ ಸಿಟಿಯ ಐಟಿ–ಬಿಟಿ ಉದ್ಯೋಗಿಗಳೂ ಒಳಗೊಂಡಂತೆ ಲಕ್ಷಾಂತರ ಜನರು ವಾಹನ ಸಂದಣಿಯಲ್ಲಿ ಸಿಲುಕೊಂಡು ಸಮಯಕ್ಕೆ ಸರಿಯಾಗಿ ಗಮ್ಯ ತಲುಪಲಾರದೇ ಒದ್ದಾಡುವುದು ಇನ್ನೆರಡು ತಿಂಗಳಲ್ಲಿ ತಪ್ಪಲಿದೆ. ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, 3.5 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ರಾಷ್ಟ್ರೀಯ ವಿದ್ಯಾಲಯದಿಂದ ಬೊಮ್ಮಸಂದ್ರವರೆಗೆ 18.82 ಕಿ.ಮೀ. ಉದ್ದವಿದ್ದು, ಎಲ್ಲಿಯೂ ಸುರಂಗವಿಲ್ಲದೇ ಎತ್ತರಿಸಿದ ಮಾರ್ಗದಲ್ಲಿಯೇ ನಿರ್ಮಿಸಲಾಗಿದೆ. ಬಸವನಗುಡಿಯ ಹತ್ತಿರದಿಂದ ಆರಂಭಗೊಳ್ಳುವುದರಿಂದ ಲಾಲ್‌ಬಾಗ್ ಸಸ್ಯಕಾಶಿ ಮತ್ತು ದೊಡ್ಡ ಬಸವಣ್ಣ ದೇವಸ್ಥಾನದಂತಹ (ಬುಲ್ ಟೆಂಪಲ್‌) ಪ್ರಮುಖ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್‌ ಲೇಔಟ್, ಆಕ್ಸ್‌ಫರ್ಡ್ ಕಾಲೇಜು ನಿಲ್ದಾಣಗಳು ವಾಣಿಜ್ಯ ಮತ್ತು ವಸತಿ ಪ್ರದೇಶಗಳಿಗೆ ಸಮೀಪದಲ್ಲಿವೆ. ಇದರಿಂದಾಗಿ ಉದ್ಯೋಗದ ಸ್ಥಳಗಳಿಗೆ, ಮಾರುಕಟ್ಟೆಗಳಿಗೆ ಸುಲಭವಾದ ಸಂಪರ್ಕವನ್ನು ಏರ್ಪಡಿಸಲಿದೆ.

ಪ್ರಮುಖ ಐಟಿ ಕೇಂದ್ರವಾದ ಎಲೆಕ್ಟ್ರಾನಿಕ್ಸ್‌ ಸಿಟಿ ಮೂಲಕ ಹಳದಿ ಮಾರ್ಗವು ಹಾದು ಹೋಗುತ್ತದೆ. ಎಲೆಕ್ಟ್ರಾನಿಕ್ಸ್ ಸಿಟಿ 1 (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ಸ್ ಸಿಟಿ 2, ಹುಸ್ಕೂರು ರಸ್ತೆ, ಹೆಬ್ಬಗೋಡಿ ನಿಲ್ದಾಣಗಳು ಐಟಿ ಹಬ್‌ಗಳನ್ನು ಸುಲಭವಾಗಿ ಸಂಪರ್ಕಿಸುವಂತೆ ಮಾಡಿವೆ.  ಇನ್ಫೊಸಿಸ್, ವಿಪ್ರೊ,  ಟೆಕ್ ಮಹೀಂದ್ರಾ ಮುಂತಾದ ಪ್ರಮುಖ ಐಟಿ ಕಂಪನಿಗಳು ಇಲ್ಲಿರುವುದರಿಂದ ಸಾವಿರಾರು ಐಟಿ ಉದ್ಯೋಗಿಗಳಿಗೆ ಉಪಯೋಗವಾಗಲಿದೆ. ಬೊಮ್ಮಸಂದ್ರದವರೆಗೆ ಮೆಟ್ರೊ ರೈಲು ಬರುವುದರಿಂದ ಸುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಮಾತ್ರವಲ್ಲ, ಆನೇಕಲ್ ಕೈಗಾರಿಕಾ ಪ್ರದೇಶದ ಉದ್ಯೋಗಿಗಳಿಗೂ ಅನುಕೂಲವಾಗಲಿದೆ.

ADVERTISEMENT
ಡಿಸೆಂಬರ್‌ನಲ್ಲಿ ಸುರಕ್ಷತಾ ಆಯುಕ್ತರ ಪರೀಕ್ಷೆ

ಜೂನ್‌ನಿಂದ ಸುಮಾರು ಮೂರು ತಿಂಗಳು ವಿವಿಧ ತಂತ್ರಜ್ಞರು ಹಳದಿ ಮಾರ್ಗದಲ್ಲಿ ಹಲವು ಪರೀಕ್ಷೆಗಳನ್ನು ನಡೆಸಿದ್ದಾರೆ. ಚಾಲಕ ರಹಿತ ಎಂಜಿನ್‌ ಕೋಚ್‌ನಲ್ಲಿ ಸಂಚರಿಸಿ ಟ್ರ್ಯಾಕ್ಷನ್‌ ಮತ್ತು ಬ್ರೇಕಿಂಗ್‌ ಪರೀಕ್ಷೆ ಕೂಡಾ ಮಾಡಿದ್ದಾರೆ.

ಈ ಪರೀಕ್ಷೆಗಳು ಯಶಸ್ವಿಯಾದ ಬಳಿಕ ಸೆಪ್ಟೆಂಬರ್‌ನಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್‌ಡಿಎಸ್‌ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆಗಳನ್ನು ನಡೆಸಿತ್ತು. ರೋಲಿಂಗ್ ಸ್ಟಾಕ್‌ (ರೈಲು) ತಜ್ಞರು, ಹಳಿ ತಂತ್ರಜ್ಞರು, ಬ್ರೇಕ್ ತಂತ್ರಜ್ಞರು, ವಿವಿಧ ತಾಂತ್ರಿಕ ಪರಿಣಿತರ ತಂಡದ ಸದಸ್ಯರು ಈ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು.

ಕೊನೆಯದಾಗಿ ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷೆ ನಡೆಸಬೇಕಿದೆ. ಡಿಸೆಂಬರ್‌ನಲ್ಲಿ ರೈಲ್ವೆ ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್‌ ಮಧುಕರ್‌ ಚೌಧರಿ ಮತ್ತು ತಂಡ ಬಂದು ಪರೀಕ್ಷೆ ನಡೆಸಲಿದೆ. ಅವರು ಒಪ್ಪಿಗೆ ನೀಡಿದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈಲು ಸಂಚಾರಕ್ಕೆ ದಿನ ನಿಗದಿ ಮಾಡಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬರಬೇಕಿದೆ ರೈಲು:

ಕಾಮಗಾರಿ ಪೂರ್ಣಗೊಂಡು ಪರೀಕ್ಷೆಗಳು ಮುಗಿದಿದ್ದರೂ ರೈಲುಗಳ ಪೂರೈಕೆ ತಡವಾಗಿರುವುದರಿಂದ ರೈಲು ಸಂಚಾರ ಮುಂದಕ್ಕೆ ಹೋಗಿದೆ. ಸದ್ಯ ಒಂದು ಕೋಚ್‌ (6 ಬೋಗಿಗಳ ಒಂದು ಸೆಟ್‌) ಇದ್ದು, ಡಿಸೆಂಬರ್‌ ಅಂತ್ಯಕ್ಕೆ ಮತ್ತೆರಡು ಕೋಚ್‌ಗಳು ಬರಲಿವೆ. ಮೂರು ಕೋಚ್‌ಗಳಲ್ಲಿ ಅರ್ಧಗಂಟೆಗೆ ಒಂದು ಟ್ರಿಪ್‌ನಂತೆ ಜನವರಿಯಲ್ಲಿ ಸಂಚಾರ ಆರಂಭವಾಗಲಿದೆ. ಒಟ್ಟು 14 ಕೋಚ್‌ಗಳು ಬೇಕಿದ್ದು, 15 ನಿಮಿಷಕ್ಕೊಂದು ಟ್ರಿಪ್‌ ನಡೆಸಲು 8 ಕೋಚ್‌ಗಳ ಅವಶ್ಯಕತೆ ಇದೆ. ಮತ್ತೆ ಮೂರು ತಿಂಗಳಲ್ಲಿ ಎಲ್ಲ ಕೋಚ್‌ಗಳು ಪೂರೈಕೆಯಾಗಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಾಲ್ಕು ವಿಶೇಷಗಳು
  1. ಹಳದಿ ಮಾರ್ಗವನ್ನು ಚಾಲಕರಹಿತ ಎಂಜಿನ್‌ ಹೊಂದಿರುವ ರೈಲು ಸಂಚಾರಕ್ಕೆ ಪೂರಕವಾಗುವಂತೆ ರೂಪಿಸಲಾಗಿದೆ. ಇತರ ಮಾರ್ಗಗಳಲ್ಲಿ ‘ಡಿಸ್ಟೇನ್ಸ್‌ ಟು ಗೊ’ (ಡಿಟಿಜಿ) ವ್ಯವಸ್ಥೆಯ ಲೋಕೊ ಪೈಲೆಟ್‌ ಮೆಟ್ರೊಗಳು ಸಂಚರಿಸುತ್ತಿವೆ. ಹಳದಿ ಮಾರ್ಗದಲ್ಲಿ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ಮೂಲಕ ರೈಲುಗಳು ಚಲಿಸಲಿವೆ. ಮೊದಲ ಮೂರು ವರ್ಷ ಲೋಕೊ ಪೈಲೆಟ್‌ ಇರುತ್ತಾರೆ. ಯಾವುದೇ ತಾಂತ್ರಿಕ ತೊಂದರೆ ಇಲ್ಲದಿರುವುದು ಖಚಿತವಾದ ಮೇಲೆ ಲೋಕೊ ಪೈಲೆಟ್‌ ಇಲ್ಲದೇ ರೈಲು ಸಂಚರಿಸಲಿದೆ.

  2. ನಗರದ ಅತಿ ಎತ್ತರದ ಇಂಟರ್‌ಚೇಂಜ್ ಮೆಟ್ರೊ ನಿಲ್ದಾಣ ಜಯದೇವದಲ್ಲಿ ನಿರ್ಮಾಣವಾಗುತ್ತಿದೆ. ಬನ್ನೇರುಘಟ್ಟ ಮತ್ತು ಡೇರಿ ವೃತ್ತವನ್ನು ಸಂಪರ್ಕಿಸುವ ಅಂಡರ್‌ಪಾಸ್, ರಾಗಿಗುಡ್ಡ ಮತ್ತು ಬಿಎಟಿಂಎ ಲೇಔಟ್‌ ಸಂಪರ್ಕಿಸುವ ನೆಲಮಟ್ಟದ ರಸ್ತೆ, ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಾಗುವ ಡಬಲ್ ಡೆಕರ್‌ ರಸ್ತೆ, ಅದರ ಮೇಲೆ ಹಳದಿ ಮೆಟ್ರೊ ಮಾರ್ಗ, ಅದರ ಮೇಲೆ ಮೆಟ್ರೊ ಕಾನ್ಕೋರ್ಸ್‌, ಅದರ ಮೇಲೆ ಗುಲಾಬಿ ಮೆಟ್ರೊ ಮಾರ್ಗ ಇರಲಿದೆ. ಮುಂಬೈ, ಜೈಪುರ, ನಾಗಪುರದಲ್ಲಿ ಈ ರೀತಿಯ ನಿಲ್ದಾಣಗಳಿದ್ದು, ದಕ್ಷಿಣ ಭಾರತದಲ್ಲಿ ಇದೇ ಮೊದಲನೇಯದ್ದಾಗಿದೆ.

  3. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಇದೇ ಮೊದಲ ಬಾರಿಗೆ ಮೆಟ್ರೊ ನಿಲ್ದಾಣಗಳ ನಡುವೆ ಎತ್ತರಿಸಿದ ಸ್ವಯಂಚಾಲಿತ ಪಾದಚಾರಿ ಮಾರ್ಗ (ಸ್ಕೈವಾಕ್‌ ಟ್ರಾವೆಲೇಟರ್‌) ನಿರ್ಮಿಸಲಾಗುತ್ತಿದೆ. ಕೇಂದ್ರ ರೇಷ್ಮೆ ಮಂಡಳಿ (ಸಿಎಸ್‌ಬಿ) ಜಂಕ್ಷನ್‌ನಲ್ಲಿರುವ ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ನಿಲ್ದಾಣ ಮತ್ತು ನಿರ್ಮಾಣಗೊಳ್ಳುತ್ತಿರುವ ನೀಲಿ ಮಾರ್ಗದ ನಿಲ್ದಾಣಗಳ ನಡುವೆ ಟ್ರಾವೆಲೇಟರ್‌ ನಿರ್ಮಿಸಲಾಗುತ್ತಿದೆ.

  4. ಹಳದಿ ಮಾರ್ಗದಲ್ಲಿ ರಾಗಿಗುಡ್ಡದಿಂದ ಕೇಂದ್ರ ರೇಷ್ಮೆ ಮಂಡಳಿವರೆಗೆ 3.36 ಕಿ.ಮೀ. ಉದ್ದ ರೋಡ್ ಕಂ ರೈಲ್‌ (ಡಬಲ್ ಡೆಕರ್‌) ಮೇಲ್ಸೇತುವೆ ನಿರ್ಮಾಣವಾಗಿದೆ. ರಾಗಿಗುಡ್ಡದಿಂದ ಕೇಂದ್ರ ರೇಷ್ಮೆ ಮಂಡಳಿವರೆಗೆ ಕಾಮಗಾರಿ ಪೂರ್ಣಗೊಂಡು ವಾಹನಗಳ ಸಂಚಾರ ಆರಂಭವಾಗಿದೆ. ರೇಷ್ಮೆ ಮಂಡಳಿಯಿಂದ ರಾಗಿಗುಡ್ಡ ಕಡೆಗೆ ಕಾಮಗಾರಿ ನಡೆಯುತ್ತಿದ್ದು, 2025ರ ಜೂನ್‌ ವೇಳೆಗೆ ಆ ಕಡೆಯಿಂದಲೂ ವಾಹನ ಸಂಚಾರ ಶುರುವಾಗಲಿದೆ.

‘ಪ್ರಯಾಣಿಕರ ಸಮಯ ಉಳಿತಾಯ’

ಬೆಂಗಳೂರಿನ ಜನನಿಬಿಡ, ವಾಹನ ನಿಬಿಡ ರಸ್ತೆಗಳಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ರಸ್ತೆಯೂ ಒಂದಾಗಿದೆ. ಉದ್ಯೋಗಿಗಳು, ಉದ್ಯಮಿಗಳು, ಜನಸಾಮಾನ್ಯರ ಸಮಯ ಸಂಚಾರದಲ್ಲೇ ಹೆಚ್ಚು ವ್ಯಯವಾಗುತ್ತಿತ್ತು. ಆರ್‌.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಜನವರಿ ಎರಡನೇ ವಾರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಿಸುವ ಗುರಿ ಇಟ್ಟುಕೊಂಡಿದ್ದೇವೆ. ಮೆಟ್ರೊ ಸಂಚಾರವು ಪ್ರಯಾಣಿಕರ ಸಮಯ ಉಳಿಸಲಿದೆ. ವಾಹನದಟ್ಟಣೆಯೂ ಕಡಿಮೆಯಾಗಲಿದೆ. ಆರಂಭದಲ್ಲಿ ಅರ್ಧಗಂಟೆಗೆ ಒಮ್ಮೆ ರೈಲು ಚಲಿಸುವುದರಿಂದ ದಿನಕ್ಕೆ 50 ಸಾವಿರ ಜನರು ಪ್ರಯಾಣಿಸುವ ನಿರೀಕ್ಷೆ ಇದೆ. ಮುಂದೆ ಟ್ರಿಪ್‌ ಜಾಸ್ತಿಯಾದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಳವಾಗಲಿದ್ದು, ಪೂರ್ಣಪ್ರಮಾಣದಲ್ಲಿ ಆರಂಭವಾದಾಗ ಪ್ರಯಾಣಿಸುವವರ ಪ್ರಮಾಣ 3.5 ಲಕ್ಷ ದಾಟುವ ನಿರೀಕ್ಷೆ ಇದೆ – ಎಂ. ಮಹೇಶ್ವರರಾವ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ಜನ ಏನಂತಾರೆ?

‘ರಸ್ತೆಯಲ್ಲಿ ಸಾಗುವುದೇ ಹರಸಾಹಸ’

ನಾನು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಉದ್ಯೋಗಿಯಾಗಿದ್ದೇನೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತಿಗೆ ವಾಹನ ದಟ್ಟಣೆ ವಿಪರೀತವಾಗಿರುವುದರಿಂದ ಕಚೇರಿಗೆ ಬರುವುದು ಮತ್ತು ಮನೆಗೆ ತೆರಳುವುದೇ ಹರಸಾಹಸವಾಗಿದೆ. ನಮ್ಮ ಸ್ವಂತ ವಾಹನವಿರಲಿ, ಬಸ್‌ ಇರಲಿ ದಟ್ಟಣೆ ಅವಧಿಯಲ್ಲಿ ಆಮೆಗತಿಯಲ್ಲಿ ಸಾಗಬೇಕು. ಮೆಟ್ರೊ ರೈಲು ಸಂಚಾರ ಆರಂಭವಾದರೆ ಈ ಹಿಂಸೆಯಿಂದ ಪಾರಾಗಬಹುದು.

– ಶುಭಾ ಬಿ.ಎಸ್‌., ಇನ್ಫೊಸಿಸ್‌ ಉದ್ಯೋಗಿ

‘ಮೆಟ್ರೊಗಾಗಿ ಕಾಯುತ್ತಿರುವೆ’

ಮೆಟ್ರೊ ಮಾರ್ಗ ನಿರ್ಮಾಣವಾಗಿ ಬಹಳ ಸಮಯವಾಯಿತು. ಯಾವಾಗ ಮೆಟ್ರೊ ಸಂಚಾರ ಆರಂಭಿಸುತ್ತಾರೆ ಎಂದು ಕಾಯುತ್ತಿದ್ದೇನೆ. ಕೆಂಗೇರಿಯಲ್ಲಿರುವ ನಮ್ಮ ಮನೆಯಿಂದ ಎಲೆಕ್ಟ್ರಾನಿಕ್‌ ಸಿಟಿಗೆ ಹೋಗಬೇಕಿದ್ದರೆ ಎರಡು ಗಂಟೆ ಮೊದಲು ಹೊರಡಬೇಕಿತ್ತು. ಈ ಮಾರ್ಗದಲ್ಲಿ ಮೆಟ್ರೊ ಆರಂಭವಾದರೆ ಎರಡೆರಡು ಮೆಟ್ರೊ ಬದಲಾಯಿಸಬೇಕಿದ್ದರೂ ಒತ್ತಡವಿಲ್ಲದೇ ಪ್ರಯಾಣಿಸಬಹುದು. ನಿಗದಿತ ಸಮಯದಲ್ಲಿ ತಲುಪಬಹುದು.

– ಪವಿತ್ರಾ ಪಿ., ಇನ್ಫೊಸಿಸ್‌ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.