ಬೆಂಗಳೂರು: ‘ಒಣ ಕಸ ಮತ್ತು ಹಸಿ ಕಸವನ್ನು ಮೂಲದಲ್ಲೇ ಬೇರ್ಪಡಿಸಿ ಕೊಡುವುದು ನಗರದಲ್ಲಿ ಸೆ.1ರಿಂದ ಕಡ್ಡಾಯವಾಗಲಿದೆ. ಶೇ 90ರಷ್ಟು ಕಸ ಮೂಲದಲ್ಲೇ ಬೇರ್ಪಡೆಯಾಗುವುದರಿಂದ ನಗರದ ಕಸ ವಿಲೇವಾರಿ ಸಮಸ್ಯೆ ಬಹುತೇಕ ಬಗೆಹರಿಯಲಿದೆ’
ರಾಜಧಾನಿಯ ಕಸ ವಿಲೇವಾರಿ ವ್ಯವಸ್ಥೆಯನ್ನು ಹದ್ದುಬಸ್ತಿಗೆ ತರುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನೀಡುತ್ತಾ ಬಂದಿರುವ ಭರವಸೆ ಇದು. ಕಸ ವಿಲೇವಾರಿ ವ್ಯವಸ್ಥೆಯಲ್ಲಿರುವ ಲೋಪಗಳಿಗಾಗಿ ಹಾಗೂ ಭೂಭರ್ತಿ ಘಟಕಗಳಿಗೆ ಮಿಶ್ರ ಕಸ ಹೋಗಲೇಬಾರದು ಎಂಬ ತನ್ನ ಸೂಚನೆಯನ್ನೇ ಪಾಲಿಸದ ಕಾರಣಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪದೇ ಪದೇ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ಸ್ವಲ್ಪ ಮಟ್ಟಿಗೆ ಎಚ್ಚೆತ್ತುಕೊಂಡಿದ್ದ ಪಾಲಿಕೆ, ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೆ ಮುಂದಾಗಿತ್ತು.
ಈ ಸಲುವಾಗಿ 2019ರಲ್ಲಿ ಟೆಂಡರ್ ಕರೆದಿದ್ದ ಪಾಲಿಕೆ ಅದರ ಬಹುತೇಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿತ್ತು. ಚುನಾವಣಾ ನೀತಿ ಸಂಹಿತೆ, ಪಾಲಿಕೆ ಸದಸ್ಯರ ಅಸಹಕಾರ ಹಾಗೂ ಗುತ್ತಿಗೆದಾರರಿಂದ ವಿರೋಧ ಮುಂತಾದ ಅಡ್ಡಿ ಆತಂಕಗಳ ನಡುವೆಯೂ ಹೊಸ ವ್ಯವಸ್ಥೆ ಒಂದು ಹಂತಕ್ಕೆ ಬಂದಿತ್ತು. ವ್ಯಾಜ್ಯಗಳಿದ್ದ 30 ವಾರ್ಡ್‌ಗಳನ್ನು ಬಿಟ್ಟು ಉಳಿದೆಲ್ಲ ವಾರ್ಡ್‌ಗಳಲ್ಲಿ ಕಸ ವಿಲೇವಾರಿಯ ಹೊಸ ಟೆಂಡರ್ ಜಾರಿಗೊಳಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದರು.
ಪ್ರತಿವರ್ಷವೂ ನಗರದಲ್ಲಿ ಕಸದ ಸಮಸ್ಯೆ ವಿಪರೀತ ಕಾಡುವುದು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ. ಇನ್ನೇನು ಒಂದು ವಾರದಲ್ಲಿ ಈ ಹಬ್ಬ ಬರಲಿದೆ. ತಯಾರಿ ಈಗಾಗಲೇ ಜೋರಾಗಿ ನಡೆದಿದೆ. ಚೌತಿ ಹಬ್ಬದ ಸಂದರ್ಭದಲ್ಲಿ ಕಸ ವಿಲೇವಾರಿಗೆ ಹೊಸ ಟೆಂಡರ್ ಜಾರಿ ಆಗುವುದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ಅಷ್ಟಾಗಿ ಕಾಡಲಿಕ್ಕಿಲ್ಲ ಎಂಬ ಭರವಸೆಯನ್ನು ನಾಗರಿಕರು ಮಾತ್ರವಲ್ಲ, ಬಿಬಿಎಂಪಿ ಅಧಿಕಾರಿಗಳೂ ಹೊಂದಿ ದ್ದರು. ಅಷ್ಟರಲ್ಲಿ ಒಂದೊಂದೇ ಆತಂಕಗಳು ಎದುರಾಗಿವೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ಜಾರಿಗೆ ಬಂದಿದೆ. ಪಾಲಿಕೆಯ 2019– 20ನೇ ಸಾಲಿನ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡುವುದಕ್ಕೆ ಮುನ್ನ ಸಚಿವ ಸಂಪುಟದಿಂದ ಅನುಮತಿ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಹೊಸ ಸರ್ಕಾರ, ಪಾಲಿಕೆ ಬಜೆಟ್‌ಗೆ ನೀಡಿದ್ದ ಅನುಮೋದನೆಯನ್ನು ತಡೆ ಹಿಡಿದಿದೆ. ಇದರಿಂದಾಗಿ, ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆ ಕೂಡಾ ತ್ರಿಶಂಕು ಸ್ಥಿತಿ ಎದುರಿಸಲಿದೆ ಎನ್ನುತ್ತವೆ ಪಾಲಿಕೆಯ ಉನ್ನತ ಮೂಲಗಳು.
ಬಾಗಲೂರು ಕಲ್ಲಿನ ಕ್ವಾರಿ, ಮಿಟಗಾನಹಳ್ಳಿ ಕ್ವಾರಿಗಳ ಭೂಭರ್ತಿ ಕೇಂದ್ರಗಳಿಗೆ ಮಿಶ್ರ ಕಸ ಸಾಗಿಸುವುದು ಸ್ಥಗಿತಗೊಂಡ ಬಳಿಕ ಪಾಲಿಕೆಯ ಅಷ್ಟೂ ಮಿಶ್ರ ಕಸವನ್ನು ಸಾಗಿಸುತ್ತಿದ್ದು ಬೆಳ್ಳಹಳ್ಳಿಯ ಭೂಭರ್ತಿ ಘಟಕಕ್ಕೆ. ನಿತ್ಯ ಸರಾಸರಿ 2,300 ಟನ್‌ಗಳಷ್ಟು ಕಸವನ್ನು ಅಲ್ಲಿಗೆ ಕೊಂಡೊಯ್ದು ಸುರಿಯಲಾಗುತ್ತಿತ್ತು. ಹಾಗಾಗಿ, ಈ ಕ್ವಾರಿ ಬಹುತೇಕ ಭರ್ತಿಯಾಗಿದೆ.
ಸ್ಥಳೀಯರ ವಿರೋಧದಿಂದಾಗಿ ಮಿಟಗಾನಹಳ್ಳಿ ಕ್ವಾರಿಗೆ ಕಸ ಸಾಗಿಸುವುದನ್ನು 2017ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಇಲ್ಲಿ ನಿತ್ಯ 600 ಟನ್‌ನಂತೆ ಕಸ ಸಾಗಿಸಿದರೆ ಇನ್ನೂ ಸುಮಾರು 36 ತಿಂಗಳುಗಳವರೆಗೆ ಈ ಭೂಭರ್ತಿ ಘಟಕವನ್ನು ಬಳಸಬಹುದು. ನಿತ್ಯ 1 ಸಾವಿರ ಟನ್‌ಗಳಷ್ಟು ಕಸವನ್ನು ಇಲ್ಲಿಗೆ ಸಾಗಿಸಿದರೂ ಈ ಕ್ವಾರಿಯನ್ನು 15 ತಿಂಗಳವರೆಗೆ ಬಳಸಬಹುದು ಎಂಬುದು ಪಾಲಿಕೆ ಅಧಿಕಾರಿಗಳ ಲೆಕ್ಕಾಚಾರ.
ಈಗ ಹೊಸ ಟೆಂಡರ್ ಜಾರಿ ಸೆಪ್ಟೆಂಬರ್‌ನಲ್ಲಿ ಆಗುವುದು ಅನುಮಾನ. ಇದೇ ಸಂದರ್ಭದಲ್ಲಿ ಬೆಳ್ಳಹಳ್ಳಿ ಕ್ವಾರಿಯೂ ಭರ್ತಿಯಾಗಿದೆ. ಇನ್ನೊಂದೆಡೆ, ಮಿಟಗಾನಹಳ್ಳಿ ಕ್ವಾರಿಯಲ್ಲಿ ಕಸ ಸುರಿಯುವುದಕ್ಕೂ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಸೆಪ್ಟೆಂಬರ್ ಬಳಿಕ ಕಸ ವಿಲೇವಾರಿ ಹದ್ದುಬಸ್ತಿಗೆ ಬರಲಿದೆ ಎಂಬ ಕನಸಿನ ಬೆಟ್ಟ ಕುಸಿಯಲಿದೆಯೇ ಎಂಬ ಆತಂಕ ಎದುರಾಗಿದೆ.
‘ಮೂಲದಲ್ಲೇ ಕಸ ವಿಂಗಡಣೆಯಾದರೆ ಸಮಸ್ಯೆ ಇರದು’
ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಏಳು ಕಸ ಸಂಸ್ಕರಣೆ ಘಟಕಗಳು ಇದ್ದರೂ ಅವುಗಳು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಇವುಗಳಲ್ಲಿ ನಿತ್ಯ ಹೆಚ್ಚೆಂದರೆ 700 ಟನ್ ಕಸ ಮಾತ್ರ ಸಂಸ್ಕರಣೆಯಾಗುತ್ತಿದೆ. ಈ ಸಂಸ್ಕರಣಾ ಘಟಕಗಳು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗದಿರುವುದಕ್ಕೂ ಪ್ರಮುಖ ಕಾರಣ ಮೂಲದಲ್ಲೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸದೇ ಇರುವುದು.
ಮನೆ ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಣೆಯನ್ನುಸೆಪ್ಟೆಂಬರ್‌ನಿಂದ ಕಟ್ಟುನಿಟ್ಟುಗೊಳಿಸಲು ಪಾಲಿಕೆ ಸಿದ್ಧತೆ ನಡೆಸಿತ್ತು. ರಾತ್ರೋರಾತ್ರಿ ಗುಟ್ಟಾಗಿ ಮಿಶ್ರ ಕಸವನ್ನು ಒಯ್ದು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುವವರಿಗೆ ದಂಡವನ್ನು ವಿಧಿಸಲು ಸಿದ್ಧತೆ ನಡೆಸಿತ್ತು. ದಂಡದ ಪ್ರಮಾಣವನ್ನೂ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು.
‘ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ಇಡಲು ಎಲ್ಲ ವಾರ್ಡ್‌ಗಳಲ್ಲಿ ಮಾರ್ಷಲ್‌ಗಳ ನೇಮಕ ಆಗಲಿದೆ. ಹೊಸ ಟೆಂಡರ್ ಜಾರಿಯಾದ ಬಳಿಕ ಪಾದಚಾರಿ ಮಾರ್ಗದ ಬಳಿ, ಸಾರ್ವಜನಿಕ ಸ್ಥಳದ ಕಸದ ತೊಟ್ಟಿಗಳು ಹಾಗೂ ಉದ್ಯಾನಗಳಿಂದ ಹೆಚ್ಚೆಂದರೆ 1500 ಟನ್ ಮಿಶ್ರ ಕಸ ಉತ್ಪಾದನೆ ಆಗಬಹುದು. ಅದನ್ನು ವಿಲೇವಾರಿ ಮಾಡುವುದು ದೊಡ್ಡ ವಿಷಯವಲ್ಲ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹೊಸ ಟೆಂಡರ್: ಜಾರಿ ಅಕ್ಟೋಬರ್‌ನಲ್ಲಿ?
‘ಕಸ ವಿಲೇವಾರಿ ಕುರಿತ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಹಾಗೂ ಕಾರ್ಯಾದೇಶ ನೀಡುವುದಕ್ಕೆ ಏನಿಲ್ಲವೆಂದರೂ ಒಂದು ತಿಂಗಳು ಬೇಕಾಗಬಹುದು. ನಂತರ ಅವರು ಸಿದ್ಧತೆ ಮಾಡಿಕೊಳ್ಳುವುದಕ್ಕೂ ಕಾಲಾವಕಾಶ ನೀಡಬೇಕಾಗುತ್ತದೆ. ಹಾಗಾಗಿ ಹೊಸ ಗುತ್ತಿಗೆದಾರರು ಅಕ್ಟೋಬರ್‌ನಲ್ಲಿ ಕಸ ಸಂಗ್ರಹ ಆರಂಭಿಸಬಹುದು’ ಎನ್ನುತ್ತಾರೆ ಪಾಲಿಕೆಯ ಆಯುಕ್ತ ಎನ್.ಮಂಜುನಾಥ ಪ್ರಸಾದ್.
‘ಬಜೆಟ್‌ಗೆ ಸರ್ಕಾರ ತಡೆ ನೀಡಿದ್ದಕ್ಕೂ ಟೆಂಡರ್ ವಿಳಂಬಕ್ಕೂ ಸಂಬಂಧವಿಲ್ಲ. ಕಸ ವಿಲೇವಾರಿ ಮಾಮೂಲಿ ಪ್ರಕ್ರಿಯೆ. ₹3 ಕೋಟಿವರೆಗಿನ ಟೆಂಡರ್‌ಗೆ ಸ್ಥಾಯಿ ಸಮಿತಿ ಒಪ್ಪಿಗೆ ನೀಡಬಹುದು. ಟೆಂಡರ್ ಮೊತ್ತ ಅದಕ್ಕಿಂತ ಹೆಚ್ಚು ಇದ್ದರೆ ಅದಕ್ಕೆ ಪಾಲಿಕೆ ಕೌನ್ಸಿಲ್ ಸಭೆಯ ಅನುಮೋದನೆ ಅಗತ್ಯ. ಇದನ್ನು ಪಡೆಯಲು ಶೀಘ್ರವೇ ಕೌನ್ಸಿಲ್ ಸಭೆ ನಡೆಸಲಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.
‘ಸದ್ಯಕ್ಕೆ ಬೆಳ್ಳಹಳ್ಳಿ ಭೂಭರ್ತಿ ಘಟಕದ ಸಮೀಪದಲ್ಲೇ ಇರುವ ಖಾಸಗಿ ಜಾಗವೊಂದರಲ್ಲಿ ಕಸ ವಿಲೇವಾರಿ ಮಾಡುತ್ತಿದ್ದೇವೆ. ಮಿಟಗಾನಹಳ್ಳಿ ಕ್ವಾರಿಯಲ್ಲಿ ಮತ್ತೆ ಕಸ ವಿಲೇವಾರಿಯನ್ನು ಆರಂಭಿಸುವುದಕ್ಕೆ ಇದ್ದ ತೊಡಕುಗಳನ್ನೂ ಒಂದೊಂದಾಗಿ ನಿವಾರಿಸಿದ್ದೇವೆ. ಹಾಗಾಗಿ, ಸದ್ಯಕ್ಕೆ ಸಮಸ್ಯೆ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.