ಬೆಂಗಳೂರು: ಆಟೊ ಚಾಲಕರೇ ಒಗ್ಗೂಡಿ ರಚಿಸಿಕೊಂಡಿರುವ ಆ್ಯಪ್ ಆಧಾರಿತ ‘ನಮ್ಮ ಯಾತ್ರಿ’ಯು ಮುಂದಿನ ವಾರದಿಂದ ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಕ್ಯಾಬ್ ಸೇವೆ ಆರಂಭಿಸಲಿದೆ.
ಈಗಾಗಲೇ, ಸೀಮಿತ ಬಳಕೆದಾರರಿಗೆ ‘ನಮ್ಮ ಯಾತ್ರಿ’ ಅಪ್ಲಿಕೇಶನ್‌ನಲ್ಲಿ ಕ್ಯಾಬ್ ಸೇವೆಯು ದೊರೆಯುತ್ತಿದೆ. ಅಪ್ಲಿಕೇಶನ್ ತೆರೆದ ತಕ್ಷಣವೇ ಮುಖಪುಟದಲ್ಲಿ ಟ್ಯಾಕ್ಸಿ ಸೇವೆಯ ಲಭ್ಯತೆ ಬಗ್ಗೆ ವಿವರಗಳು ಕಾಣಿಸಲಿವೆ. ಬೆಂಗಳೂರಿನಲ್ಲಿ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದರೆ ಇತರೆ ನಗರಗಳಿಗೂ ಈ ಸೇವೆ ವಿಸ್ತರಿಸುವ ಸಾಧ್ಯತೆಯಿದೆ.
‘ಸದ್ಯ ಶೂನ್ಯ ಶುಲ್ಕ ಆಧಾರಿತ ಆಟೊ ಸೇವೆ ಒದಗಿಸಲಾಗುತ್ತಿದೆ. ಮಂಗಳವಾರದಿಂದ ಅಧಿಕೃತವಾಗಿ ಕ್ಯಾಬ್ ಸೇವೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಆ್ಯಪ್‌ನಲ್ಲಿ ಈ ಸೇವೆಯ ಸ್ಥಿರತೆ ಹಾಗೂ ಕ್ಯಾಬ್ ಸೇವೆಯ ಬೇಡಿಕೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಹಲವು ಗ್ರಾಹಕರು ಇದರ ಪ್ರಯೋಜನ ಪಡೆದಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಮೂಲಗಳು ತಿಳಿಸಿವೆ.
‘ಶೂನ್ಯ ಶುಲ್ಕ ಮಾದರಿಯಡಿಯೇ ಕ್ಯಾಬ್ ಸೇವೆ ಆರಂಭಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿರುವ ಇತರೇ ಕಂಪನಿಗಳ ಸೇವೆಗಿಂತ ಇದು ಭಿನ್ನವಾಗಿದೆ. ಈ ಕಂಪನಿಗಳಿಗೆ ‘ನಮ್ಮ ಯಾತ್ರಿ’ ಸೇವೆಯು ತೀವ್ರ ಸವಾಲೊಡ್ಡಲಿದೆ’ ಎಂದು ತಿಳಿಸಿವೆ.
‘ಕ್ಯಾಬ್ ಸೇವೆ ಆರಂಭಿಸುತ್ತಿರುವ ಬಗ್ಗೆ ಆಟೊ ರಿಕ್ಷಾ ಚಾಲಕರಿಂದ ಯಾವುದೇ ವಿರೋಧ ವ್ಯಕ್ತವಾಗಿಲ್ಲ. ಕ್ಯಾಬ್ ಚಾಲಕರೊಟ್ಟಿಗೆ ಗ್ರಾಹಕರಿಗೆ ಸೇವೆ ಒದಗಿಸಲು ಉತ್ಸುಕರಾಗಿದ್ದಾರೆ’ ಎಂದು ಹೇಳಿವೆ.
ನಾನ್ ಎಸಿ ಹ್ಯಾಚ್‌ಬ್ಯಾಕ್ ಕಾರು, ಎಸಿ ಸೆಡಾನ್ ಕಾರು ಮತ್ತು ಎಸಿ ಎಸ್‌ಯುವಿ ಕಾರಿನ ಸೌಲಭ್ಯವಿದೆ. ಇತರೆ ಕ್ಯಾಬ್ ಸೇವೆಗೆ ಹೋಲಿಸಿದರೆ ‘ನಮ್ಮ ಯಾತ್ರಿ’ ಕ್ಯಾಬ್ ದರವು ₹10ರಿಂದ ₹13 ಕಡಿಮೆ ಇರಲಿದೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.