ADVERTISEMENT

ಬೆಂಗಳೂರು | ಆಟೊದಲ್ಲಿ ‘ಸ್ತ್ರೀ ಶಕ್ತಿ’ ಹೆಚ್ಚಿಸಿದ ‘ನಮ್ಮ ಯಾತ್ರಿ’

ಚಾಲನಾ ತರಬೇತಿ ಉಚಿತವಾಗಿ ಪಡೆದು ಚಾಲಕಿಯರಾಗುತ್ತಿರುವ ಮಹಿಳೆಯರು

ಬಾಲಕೃಷ್ಣ ಪಿ.ಎಚ್‌
Published 17 ಅಕ್ಟೋಬರ್ 2024, 23:36 IST
Last Updated 17 ಅಕ್ಟೋಬರ್ 2024, 23:36 IST
‘ಮಹಿಳಾ ಶಕ್ತಿ’ ಯೋಜನೆಯಡಿ ಆಟೊ ಚಾಲನಾ ತರಬೇತಿ ಪಡೆದು ಚಾಲಕರಾದ ಸ್ತ್ರೀಯರು
‘ಮಹಿಳಾ ಶಕ್ತಿ’ ಯೋಜನೆಯಡಿ ಆಟೊ ಚಾಲನಾ ತರಬೇತಿ ಪಡೆದು ಚಾಲಕರಾದ ಸ್ತ್ರೀಯರು   

ಬೆಂಗಳೂರು: ಉಚಿತವಾಗಿ ಆಟೊ ಚಾಲನೆ ಕಲಿಸಿಕೊಡುವ ಮೂಲಕ ‘ನಮ್ಮ ಯಾತ್ರಿ’ ಸಂಸ್ಥೆಯು ಮಹಿಳೆಯರು ಸ್ವಾವಲಂಬಿಗಳಾಗಲು ನೆರವು ನೀಡುತ್ತಿದೆ. ಈ ಯೋಜನೆಯಡಿ ಒಂದು ಸಾವಿರ ಮಹಿಳೆಯರಿಗೆ ಚಾಲನಾ ತರಬೇತಿ ನೀಡುವ ಗುರಿ ಸಂಸ್ಥೆಯ ಮುಂದಿದೆ.

2023ರ ಅಕ್ಟೋಬರ್‌ನಲ್ಲಿ ಈ ಯೋಜನೆಯನ್ನು ‘ಮಹಿಳಾ ಶಕ್ತಿ’ ಹೆಸರಿನಲ್ಲಿ ‘ನಮ್ಮ ಯಾತ್ರಿ’ ಆರಂಭಿಸಿತು. ಒಂದು ವರ್ಷದಲ್ಲಿ 108 ಮಹಿಳಾ ಚಾಲಕರು ತರಬೇತಿ ಪಡೆದಿದ್ದು, ಆಟೊ ಓಡಿಸಿ ಜೀವನ ಕಟ್ಟಿಕೊಂಡಿದ್ದಾರೆ.

‘ನಮ್ಮ ಯಾತ್ರಿ’ ಸಂಸ್ಥೆಯು ಸಾರ್ವಜನಿಕರಿಗೆ ಆಟೊ ಸೇವೆಯನ್ನು ಒದಗಿಸುತ್ತಾ ಬಂದಿದೆ. ಚಾಲಕರೂ ಮಹಿಳೆಯರೇ ಇದ್ದರೆ ಒಳ್ಳೆಯದು ಎಂದು ಕೆಲವು ಮಹಿಳಾ ಪ್ರಯಾಣಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದಕ್ಕೆ ಮನ್ನಣೆ ನೀಡಿ ಆಸಕ್ತ ಮಹಿಳೆಯರಿಗೆ ಉಚಿತವಾಗಿ ಆಟೊ ಚಾಲನೆಯ ತರಬೇತಿ ನೀಡುವ ‘ಮಹಿಳಾ ಶಕ್ತಿ’ ಯೋಜನೆಯನ್ನು ಕಳೆದ ವರ್ಷ ರೂಪಿಸಲಾಯಿತು’ ಎಂದು ‘ನಮ್ಮ ಯಾತ್ರಿ’ ಚಾಲನಾ ವಿಭಾಗದ ಮುಖ್ಯ ತರಬೇತುದಾರರಾದ ನಾಗಲಕ್ಷ್ಮೀ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ನೂರಾರು ಮಂದಿ ಕಲಿಯಲು ಮುಂದೆ ಬಂದಿದ್ದರು. ಕೆಲವರು ಅರ್ಧದಲ್ಲಿಯೇ ಬಿಟ್ಟು ಹೋದರು. 108 ಮಂದಿ ಪೂರ್ಣ ಪ್ರಮಾಣದಲ್ಲಿ ಆಟೊ ಓಡಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ. ಅದರಲ್ಲಿ 38 ಮಹಿಳೆಯರು ಸ್ವಂತ ಆಟೊವನ್ನು ಈಗ ಹೊಂದಿದ್ದಾರೆ. 30 ಮಹಿಳೆಯರು ಈಗ ತರಬೇತಿ ಪಡೆಯುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

ತರಬೇತಿ ವಿವರ: ತರಬೇತಿಗೆ ಆಸಕ್ತಿ ತೋರುವ ಮಹಿಳೆಯರ ಸಂದರ್ಶನ ನಡೆಸಿದ ಬಳಿಕ ಮೂರು ದಿನ ಪರೀಕ್ಷಾ ತರಬೇತಿ ನೀಡಲಾಗುತ್ತದೆ. ಈ ಸಮಯದಲ್ಲಿ ಕೆಲವರು ಬಿಟ್ಟು ಹೋಗುತ್ತಾರೆ. ಮುಂದೆ ಕಲಿಯುವ ಆಸಕ್ತಿ ತೋರಿಸುವವರಿಗೆ 40 ದಿನಗಳ ತರಬೇತಿ ಆರಂಭವಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರಾಯೋಗಿಕ ತರಬೇತಿ. ಶನಿವಾರ ಚಾಲನಾ ಮಾಹಿತಿ (ಥಿಯರಿ) ತರಗತಿ ನೀಡಲಾಗುತ್ತದೆ.

ಸಂಸ್ಥೆಯ 12 ತರಬೇತುದಾರರು ಕೋರಮಂಗಲ, ಡಿಮಾರ್ಟ್‌, ಫ್ರೇಜರ್‌ ಟೌನ್‌, ಬಿಸ್ಮಿಲ್ಲಾ ನಗರಗಳಲ್ಲಿ ಚಾಲನಾ ತರಬೇತಿ ನೀಡುತ್ತಾರೆ. ಬೆಳಿಗ್ಗೆ 10.30ರಿಂದ, ಮಧ್ಯಾಹ್ನ 3ರಿಂದ ಹೀಗೆ ದಿನಕ್ಕೆ ಎರಡು ತಂಡಗಳಲ್ಲಿ ತರಬೇತಿ ನೀಡಲಾಗುತ್ತದೆ. ಥಿಯರಿ ತರಗತಿಯಲ್ಲಿ ರಸ್ತೆ ಸುರಕ್ಷತೆ, ಸಂಚಾರ ನಿಯಮಾವಳಿ, ಮೊಬೈಲ್‌ ಬಳಸುವ ರೀತಿ, ನಕ್ಷೆ ನೋಡಿ ಚಾಲನೆ ಮಾಡುವುದು, ಗ್ರಾಹಕರೊಂದಿಗೆ ವರ್ತಿಸಬೇಕಿರುವ ರೀತಿ, ಅವಘಡಗಳು ಉಂಟಾದಾಗ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿಕೊಡಲಾಗುತ್ತದೆ.

ಬಾಡಿಗೆ ಆಟೊ: ‘ಆಟೊ ಚಾಲನಾ ತರಬೇತಿ ಪಡೆದವರಿಗೆ ಆಟೊ ಖರೀದಿಸುವ ಶಕ್ತಿ ಇರುವುದಿಲ್ಲ. ಅದಕ್ಕಾಗಿ ನಮ್ಮ ಯಾತ್ರಿಯೇ ಅವರಿಗೆ ದಿನಕ್ಕೆ ₹ 395 ಬಾಡಿಗೆ ನಿಗದಿ ಮಾಡಿ ಆಟೊವನ್ನು ನಾಲ್ಕು ತಿಂಗಳು ನೀಡುತ್ತದೆ. ದಿನಕ್ಕೆ ಕನಿಷ್ಠ ₹ 1200 ದುಡಿಯಬೇಕು ಎಂದು ಸಲಹೆ ನೀಡಲಾಗುತ್ತದೆ. ಆಗ ಬಾಡಿಗೆ ಮತ್ತು ದಿನದ ಖರ್ಚು ₹ 800 ಹೋದರೂ ₹ 400 ಉಳಿಸಲು ಸಾಧ್ಯವಾಗುತ್ತದೆ. ಈ ಉಳಿಕೆಯನ್ನು ಉಳಿತಾಯ ಖಾತೆಯಲ್ಲಿ ಅವರು ಹಾಕಬೇಕು. ನಾಲ್ಕು ತಿಂಗಳಿಗೆ ಸುಮಾರು ₹ 50 ಸಾವಿರ ಉಳಿತಾಯವಾಗುತ್ತದೆ. ಅದನ್ನು ಮೂಲ ಧನವಾಗಿ ಬಳಸಿಕೊಂಡು ಬ್ಯಾಂಕ್‌ ಸಾಲ ಪಡೆದು ಅವರು ಆಟೊ ಖರೀದಿಸುವಂತೆ ಮಾಡಲಾಗುತ್ತದೆ’ ಎಂದು ನಾಗಲಕ್ಷ್ಮೀ ತಿಳಿಸಿದರು.

ಈ ರೀತಿಯ ಯೋಜನೆಯಿಂದಾಗಿ ಅವರಿಗೆ ಉಳಿತಾಯ ಮಾಡುವ ಅಭ್ಯಾಸವೂ ಆಗುತ್ತಿದೆ. ಅಲ್ಲದೇ ‘ಸಿಬಿಲ್ ಸ್ಕೋರ್’ ಇಲ್ಲದವರಿಗೂ ಸಾಲ ಸಿಗುವಂತೆ ಮಾಡಲು ನಾಲ್ಕು ತಿಂಗಳ ವ್ಯವಹಾರ ಉಪಯೋಗವಾಗುತ್ತಿದೆ. ‘ಸಿಬಿಲ್‌ ಸ್ಕೋರ್‌’ ಇಲ್ಲದ ಇಬ್ಬರು ಈ ದಾಖಲೆಗಳನ್ನು ನೀಡಿ ಸಾಲ ಪಡೆದಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು.

‘ನಮ್ಮ ಯಾತ್ರಿ’ ಸಂಸ್ಥೆಯ ಚಾಲನಾ ತರಬೇತುದಾರರೊಂದಿಗೆ ಮಹಿಳಾ ಆಟೊ ಚಾಲಕರು

‘ಬದುಕು ನೀಡಿದ ‘ನಮ್ಮ ಯಾತ್ರಿ’

‘ನನ್ನ ಪತಿ ಒಂಬತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಮೂವರು ಮಕ್ಕಳನ್ನು ಸಾಕಬೇಕು. ಮನೆ ಕೆಲಸ ಹೋಟೆಲ್‌ನಲ್ಲಿ ಕೆಲಸ ತರಕಾರಿ ವ್ಯಾಪಾರ ಹೀಗೆ ಬೇರೆ ಬೇರೆ ಕೆಲಸ ಮಾಡಿದೆ. ಆದರೂ ಬದುಕು ಸಾಗಿಸುವುದೇ ಕಷ್ಟವಾಗಿತ್ತು. ಇಂಥ ಸಂದರ್ಭದಲ್ಲಿ ನಮ್ಮ ಯಾತ್ರಿ ಸಂಸ್ಥೆಯು ನನ್ನ ಪಾಲಿಗೆ ದೇವರಂತೆ ಬಂದು ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿತು’ ಎಂದು ಆಟೊ ಚಾಲಕಿ ಕೋರಮಂಗಲದ ತಮಿಳ್‌ ಸೆಲ್ವಿ ತಿಳಿಸಿದರು. ‘ಒಂದೂವರೆ ತಿಂಗಳು ಸಂಸ್ಥೆಯವರು ತರಬೇತಿ ನೀಡಿದರು. ಆ ನಂತರ ದಿನಕ್ಕೆ ₹ 400ರಂತೆ ನಾಲ್ಕು ತಿಂಗಳು ಬಾಡಿಗೆಗೆ ಓಡಿಸಲು ಆಟೊ ನೀಡಿದರು. ಬ್ಯಾಂಕ್‌ನಲ್ಲಿ ಸಾಲ ಮಾಡಿ 15 ದಿನದ ಹಿಂದೆ ಹೊಸ ಆಟೊ ಖರೀದಿಸಿದ್ದೇನೆ. ದಿನಕ್ಕೆ ₹ 1000ದಿಂದ ₹ 1500 ದುಡಿಯುತ್ತಿದ್ದೇನೆ. ಈಗ ಉಳಿತಾಯ ಏನಿಲ್ಲ. ಮನೆ ಖರ್ಚು ಮತ್ತು ಸಾಲಕ್ಕೆ ಸರಿಯಾಗಬಹುದು. ಆದರೆ ನನಗೆ ನಾನೇ ಮಾಲೀಕಳಾಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.