ಬೆಂಗಳೂರು: ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಮಾರ್ಚ್ 2ರಿಂದ 4ರವರೆಗೆ ‘ಬೆಂಗಳೂರು ಇಂಡಿಯಾ ನ್ಯಾನೊ’ದ 11ನೇ ಸಮಾವೇಶ ನಡೆಯಲಿದೆ.‘ನ್ಯಾನೋ ವಿಜ್ಞಾನದಲ್ಲಿ ನೂತನ ಆಯಾಮಗಳು ಮತ್ತು ಕೈಗಾರಿಕೆ 4.0ಗಾಗಿ ನ್ಯಾನೊ ತಂತ್ರಜ್ಞಾನ’ ಎಂಬ ವಿಷಯದಡಿ ಸಮಾವೇಶ ನಡೆಯಲಿದೆ.
ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್, ‘ವಿಜ್ಞಾನ ಮತ್ತು ತಂತ್ರಜ್ಞಾನದ ತಾಣವಾಗಿ ಬೆಂಗಳೂರು ವಿಶ್ವದ ಗಮನ ಸೆಳೆದಿದೆ. ನ್ಯಾನೊ ತಂತ್ರಜ್ಞಾನದ ಹೊಸ ಮಜಲುಗಳು ಈ ಸಮಾವೇಶದಲ್ಲಿ ಅನಾವರಣಗೊಳ್ಳಲಿವೆ’ ಎಂದರು.
‘ಉದ್ಯಮಿಗಳು, ಹೂಡಿಕೆದಾರರು, ಸಂಶೋಧನಾ ಸಂಸ್ಥೆಗಳ ಮುಖ್ಯ ವೈಜ್ಞಾನಿಕ ಅಧಿಕಾರಿಗಳು, ವಿಜ್ಞಾನಿಗಳು, ಸಂಶೋಧಕರು ಮತ್ತು ಸರ್ಕಾರದ ಉನ್ನತ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ‘ನ್ಯಾನೊ ತಂತ್ರಜ್ಞಾನವು ಉಳಿದೆಲ್ಲ ತಂತ್ರಜ್ಞಾನಗಳಿಗಿಂತ ಮುಂದಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರಲಿದೆ. 2024ರ ವೇಳೆಗೆ ನ್ಯಾನೊ ತಂತ್ರಜ್ಞಾನದ ಜಾಗತಿಕ ಮೌಲ್ಯ ₹8.75 ಲಕ್ಷ ಕೋಟಿಗೆ (125 ಬಿಲಿಯನ್ ಡಾಲರ್) ತಲುಪಲಿದೆ’ ಎಂದರು.
ಸಮಾವೇಶದ ಅಂಗವಾಗಿ ವಿಚಾರ ಸಂಕಿರಣ, ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಆಯೋಜಿಸಲಾಗುವುದು. ಅಲ್ಲದೆ, ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.