ADVERTISEMENT

‘ನ್ಯಾನೊ ಟೆಕ್‌ ಪಾರ್ಕ್‌ ಶೀಘ್ರ’

ಬೆಂಗಳೂರು ಇಂಡಿಯಾ ನ್ಯಾನೊ ಮೇಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 19:40 IST
Last Updated 2 ಮಾರ್ಚ್ 2020, 19:40 IST
ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಐಐಎಸ್‌ಸಿ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪಿ.ಎಸ್. ಅನಿಲ್ ಕುಮಾರ್ ಅವರಿಗೆ ಬಿ.ಎಸ್‌. ಯಡಿಯೂರಪ್ಪ ಅವರು ‘ಪ್ರೊ. ಸಿ.ಎನ್‌.ಆರ್‌. ರಾವ್‌ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್‌’ ಪ್ರಶಸ್ತಿ ಪ್ರದಾನ ಮಾಡಿದರು. ‍ಪ್ರೊ.ಎ.ಕೆ.ಸೂದ್, ಪ್ರೊ.ಸಿ.ಎನ್‌.ಆರ್‌. ರಾವ್‌ ಹಾಗೂ ಸಿ.ಎನ್.ಅಶ್ವತ್ಥನಾರಾಯಣ ಇದ್ದಾರೆ –ಪ್ರಜಾವಾಣಿ ಚಿತ್ರ
ನ್ಯಾನೊ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಐಐಎಸ್‌ಸಿ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪಿ.ಎಸ್. ಅನಿಲ್ ಕುಮಾರ್ ಅವರಿಗೆ ಬಿ.ಎಸ್‌. ಯಡಿಯೂರಪ್ಪ ಅವರು ‘ಪ್ರೊ. ಸಿ.ಎನ್‌.ಆರ್‌. ರಾವ್‌ ಬೆಂಗಳೂರು ಇಂಡಿಯಾ ನ್ಯಾನೋ ಸೈನ್ಸ್‌’ ಪ್ರಶಸ್ತಿ ಪ್ರದಾನ ಮಾಡಿದರು. ‍ಪ್ರೊ.ಎ.ಕೆ.ಸೂದ್, ಪ್ರೊ.ಸಿ.ಎನ್‌.ಆರ್‌. ರಾವ್‌ ಹಾಗೂ ಸಿ.ಎನ್.ಅಶ್ವತ್ಥನಾರಾಯಣ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಸಹಯೋಗದಲ್ಲಿ ನ್ಯಾನೊ ಟೆಕ್‌ ಪಾರ್ಕ್‌ ನಿರ್ಮಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಹೋಟೆಲ್ ಲಲಿತ್ ಅಶೋಕದಲ್ಲಿ ಹಮ್ಮಿಕೊಂಡ ಮೂರು ದಿನಗಳ ‘ಬೆಂಗಳೂರು ಇಂಡಿಯಾ ನ್ಯಾನೊ- 2020’ರ 11ನೇ ಆವೃತ್ತಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಕೌಶಲಯುತ ಮಾನವ ಸಂಪನ್ಮೂಲ ಪೂರೈಕೆ ಒಳಗೊಂಡಂತೆ ಈ ಕ್ಷೇತ್ರದ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲಾಗುವುದು. ಬೆಂಗಳೂರನ್ನು ನ್ಯಾನೊ ರಾಜಧಾನಿಯಾಗಿ ರೂಪಿಸಲಾಗುವುದು’ ಎಂದರು.

ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್, ‘ಔಷಧಗಳ ತಯಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನ್ಯಾನೊ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ. ವೈದ್ಯಕೀಯ ಕ್ಷೇತ್ರ ಈ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳಬೇಕು’ ಎಂದರು.

ADVERTISEMENT

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ರಾಜ್ಯದಲ್ಲಿ ಸರ್ಕಾರವು ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಶೀಘ್ರ ಜಾರಿಗೆ ಬರಲಿದೆ. ಅದರಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಗೆ ಪೂರಕವಾದ ಹಲವಾರು ಅಂಶಗಳು ಇರಲಿವೆ. ನೀತಿ-ನಿರೂಪಣೆಯಲ್ಲಿ ಪ್ರೊ. ಸಿ.ಎನ್.ಆರ್.ರಾವ್ ಮಾರ್ಗದರ್ಶನದ ‘ವಿಷನ್ ಗ್ರೂಪ್’ ನೆರವಾಗಲಿದೆ’ ಎಂದರು.

‘ಬೆಂಗಳೂರನ್ನು ನ್ಯಾನೊ ತಂತ್ರಜ್ಞಾನದ ಹಬ್‌ ಮಾಡಲು ಹಲವು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ನೆರವು ಪಡೆಯಲಾಗುವುದು’ ಎಂದರು.‘ಪ್ರೊ.ಸಿ.ಎನ್.ಆರ್.ರಾವ್ ಬೆಂಗಳೂರು ಇಂಡಿಯಾ ನ್ಯಾನೊ ವಿಜ್ಞಾನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ದೇವನಹಳ್ಳಿ ಬಳಿ ನಿರ್ಮಾಣ?
‘ನ್ಯಾನೊ ಟೆಕ್‌ ಪಾರ್ಕ್‌ಗೆ ನಗರದ ಬಳ್ಳಾರಿ ರಸ್ತೆಯಲ್ಲಿ ಜಾಗ ಗುರುತಿಸಲಾಗಿದೆ’ ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಗಳ ಪ್ರಕಾರ, ದೇವನಹಳ್ಳಿ ಬಳಿ 15 ಎಕರೆ ಜಾಗ ಇದ್ದು, ಅಲ್ಲಿ ಈ ಪಾರ್ಕ್ ತಲೆಯೆತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.