ADVERTISEMENT

ಕನ್ನಡಿಗರ ಧ್ವನಿ ರಾಜ್ಯದ ಗಡಿ ದಾಟುತ್ತಿಲ್ಲ: ಜಿ.ಎನ್. ಉಪಾಧ್ಯ ಬೇಸರ

ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಜಿ.ಎನ್. ಉಪಾಧ್ಯ ಬೇಸರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:45 IST
Last Updated 6 ಫೆಬ್ರುವರಿ 2022, 20:45 IST
ಜಿ.ಎನ್.ಉಪಾಧ್ಯ
ಜಿ.ಎನ್.ಉಪಾಧ್ಯ   

ಬೆಂಗಳೂರು: ‘ಭಾಷೆಯ ಬೆಳವಣಿಗೆಗೆ ಇಲ್ಲಿ ಪ್ರತ್ಯೇಕ ಅಕಾಡೆಮಿ, ಪ್ರಾಧಿಕಾರಿಗಳು ಇವೆ. ಅದಾಗಿಯೂ ಕನ್ನಡ ಹಾಗೂ ಕನ್ನಡಿಗರ ಧ್ವನಿ ರಾಜ್ಯದ ಗಡಿ ದಾಟುತ್ತಿಲ್ಲ. ನಮ್ಮ ದೃಷ್ಟಿಕೋನಗಳು ಸೀಮಿತವಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂದುವಿಮರ್ಶಕ ಹಾಗೂ ಮುಂಬೈ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಜಿ.ಎನ್.ಉಪಾಧ್ಯ ಬೇಸರ ವ್ಯಕ್ತಪಡಿಸಿದರು.

ಕನ್ನಡ ಜನಶಕ್ತಿ ಕೇಂದ್ರ,ನರಹಳ್ಳಿ ಪ್ರತಿಷ್ಠಾನ ಹಾಗೂ ಮೈಸೂರು ಅಸೋಸಿಯೇಷನ್ ಜಂಟಿಯಾಗಿ ಆನ್‌ಲೈನ್ ವೇದಿಕೆ
ಯಲ್ಲಿ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್‌. ಶ್ರೀಕೃಷ್ಣ ಅವರು2021ನೇ ಸಾಲಿನ ‘ನರಹಳ್ಳಿ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 15 ಸಾವಿರ ನಗದು ಒಳಗೊಂಡಿದೆ.

‘ಉತ್ತರ ಭಾರತದ ರಾಜ್ಯದವರಿಗೆ ಕರ್ನಾಟಕದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಬೆಂಗಳೂರು, ಮೈಸೂರಿನ ಬಗ್ಗೆ ಮಾತ್ರ ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ. ಕನ್ನಡ ಭಾಷೆಯು ರಾಷ್ಟ್ರಮಟ್ಟದಲ್ಲಿ ಬೆಳವಣಿಗೆ ಹೊಂದಿದರೆ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಲು ಎಲ್ಲರೂ ಉತ್ಸುಕರಾಗುತ್ತಾರೆ. ಹೀಗಾಗಿ, ವಿಶಾಲ ದೃಷ್ಟಿಕೋನದೊಂದಿಗೆ ಕಾರ್ಯತತ್ಪರರಾಗಬೇಕು.ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನ ದೇಶದ ವಿವಿಧೆಡೆ ನಡೆಯುತ್ತದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸಾಹಿತಿಗಳನ್ನು ಆಹ್ವಾನಿಸಲಾಗುತ್ತದೆ. ಆದರೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ’ ಎಂದುಜಿ.ಎನ್.ಉಪಾಧ್ಯ ತಿಳಿಸಿದರು.

ADVERTISEMENT

‘ಈ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಸಾಹಿತ್ಯ ಗೋಷ್ಠಿಗಳಲ್ಲಿ ಕನ್ನಡದ ಸಾಹಿತಿಗಳಿಗೆ ವಿಶೇಷ ಮನ್ನಣೆಯಿತ್ತು. ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಭೈರಪ್ಪ ಅವರ ಸಾಹಿತ್ಯದ ಬಗ್ಗೆ ಚರ್ಚೆ ನಡೆಯಿತು.ಹಾ.ಮಾ. ನಾಯಕರಂತಹವರು ರಾಷ್ಟ್ರಮಟ್ಟದಲ್ಲಿ ಕನ್ನಡ ಬೆಳೆಯುವಂತೆ ಮಾಡಿದರು. ಆದರೆ, ಈಗ ರಾಷ್ಟ್ರಮಟ್ಟದಲ್ಲಿ ಕನ್ನಡದ ವಕ್ತಾರರು ಇಲ್ಲ.ಕನ್ನಡಿಗರು ಇಲ್ಲಿಯವರನ್ನೇ ಗುರುತಿಸುವಲ್ಲಿ ಸೋಲುತ್ತಿದ್ದಾರೆ. ಕನ್ನಡ ಅಪಾಯ ಎದುರಿಸುತ್ತಿದೆ ಎಂದು ಬೊಬ್ಬೆ ಹಾಕುವುದರ ಬದಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಯತತ್ಪರರಾಗಬೇಕು. ಸರ್ಕಾರ, ಅಕಾಡೆಮಿಗಳು ಕಣ್ಣು ತೆರೆದು ನೋಡಬೇಕು’ ಎಂದು ಹೇಳಿದರು.

ಮುಂಬೈ ಬಗ್ಗೆ ಮೋಹ:ಕವಿ ಹಾಗೂನರಹಳ್ಳಿ ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ, ‘ನಾಡನ್ನು ಕಟ್ಟುವುದು ಸಾಹಿತ್ಯದ ಕೆಲಸ. ಮುಂಬೈ ಬಗ್ಗೆ ನಮಗೆ ವಿಶೇಷ ಮೋಹ ಇದೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮುಂಬೈ ಕನ್ನಡಿಗರು ದೊಡ್ಡ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಒಳಗಡೆಗಿಂತ ಹೊರಗಡೆ ಕನ್ನಡದ ದೀಪ ಹಚ್ಚುವುದು ಕಷ್ಟದ ಕೆಲಸ. ಉಪಾಧ್ಯ ಅಂತಹವರು ಈ ಕೆಲಸವನ್ನು ಉತ್ತಮವಾಗಿ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನರಹಳ್ಳಿ ಪ್ರತಿಷ್ಠಾನದ ಕಾರ್ಯದರ್ಶಿಆನಂದರಾಮ ಉಪಾಧ್ಯ, ಪ್ರಶಸ್ತಿಯ ಸ್ಥಾಪಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ರಜನಿಬಾಲಸುಬ್ರಹ್ಮಣ್ಯ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.