ಬೆಂಗಳೂರು: ಕುಟುಂಬದವರ ಅಸ್ಥಿಮಜ್ಜೆ ಹೊಂದಾಣಿಕೆಯಾಗದ ಕಾರಣ 10 ವರ್ಷದ ಬಾಲಕನಿಗೆ ಜರ್ಮನಿ ದಾನಿಯ ಸಹಾಯ ಪಡೆದು ನಗರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ.
‘ಕೋಲಾರದಲ್ಲಿ ನಾವು ನೆಲೆಸಿದ್ದೇವೆ. ಆರಂಭದಲ್ಲಿ ಚೆನ್ನೈ ಸೇರಿದಂತೆ ಸಾಕಷ್ಟು ಕಡೆ ತೋರಿಸಿದರೂ ಮಗನ ಕ್ಯಾನ್ಸರ್ ವಾಸಿಯಾಗಲಿಲ್ಲ. ಇನ್ನೊಬ್ಬ ಮಗನ ಅಸ್ಥಿಮಜ್ಜೆ ಕೂಡ ಹೊಂದಾಣಿಕೆಯಾಗಲಿಲ್ಲ. ಆದರೆ ಜರ್ಮನಿಯ ದಾನಿಯೊಬ್ಬರ ಸಹಾಯದಿಂದ ಮಗ ಬದುಕುಳಿದಿದ್ದಾನೆ’ ಎಂದು ಮಗುವಿನ ತಾಯಿ ಹೇಳಿದರು.
ನಗರದಲ್ಲಿ ಬುಧವಾರ ನಾರಾಯಣ ಹೆಲ್ತ್ ಸಿಟಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಮಗುವಿಗೆ ಇರುವ ನಿಜವಾದ ಸಮಸ್ಯೆಯನ್ನು ನಾರಾಯಣ ಹೆಲ್ತ್ ಸಿಟಿ ವೈದ್ಯರು ಕಂಡುಹಿಡಿದರು. ಅಸ್ಥಿಮಜ್ಜೆ ಚಿಕಿತ್ಸೆ ಕೂಡ ಯಶಸ್ವಿಯಾಗಿದೆ. ಈಗ ಅವನು ಎಲ್ಲರಂತೆ ಆಗಿದ್ದಾನೆ’ ಎಂದು ಅವರು ಸಂತಸಹಂಚಿಕೊಂಡರು.
ನಾರಾಯಣ ಹೆಲ್ತ್ ಸಿಟಿ ಅಧ್ಯಕ್ಷ ಡಾ. ದೇವಿ ಶೆಟ್ಟಿ ‘ಕ್ಯಾನ್ಸರ್ ರೋಗಿಗಳ ವೆಚ್ಚ ಹೆಚ್ಚುತ್ತಿದೆ. ಸಾಕಷ್ಟು ಸಂಘ, ಸಂಸ್ಥೆಗಳು ಸಹಾಯ ಮಾಡುತ್ತಿವೆ. ಆದರೆ ಬಡವರೂ ಸುಲಭವಾಗಿ ಚಿಕಿತ್ಸೆ ಪಡೆಯುವಂತೆ ಆಗಬೇಕು’ ಎಂದು ಅಭಿಪ್ರಾಯಪಟ್ಟರು.
ಸಾವಿರ ಅಸ್ಥಿಮಜ್ಜೆ ಕಸಿ
‘ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಕೇಂದ್ರದ ನೆರವಿನಿಂದ ಇಲ್ಲಿಯವರೆಗೂ 1000 ರೋಗಿಗಳಿಗೆ ಅಸ್ಥಿಮಜ್ಜೆ ಕಸಿ ಮಾಡಲಾಗಿದೆ. ರಾಜ್ಯದಲ್ಲೇ ಹೆಚ್ಚು ಕಸಿಗಳು ಇಲ್ಲಿ ಆಗಿವೆ. ಅಂತರರಾಷ್ಟ್ರೀಯ ಮಟ್ಟದ ದಾನಿಗಳ ಸಹಾಯ ಪಡೆದು ಕಸಿ ಮಾಡಲಾಗಿದೆ’ ಎಂದು ಡಾ. ಶರತ್ ದಾಮೋದರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.