ಬೆಂಗಳೂರು: ನಾರಾಯಣ ನೇತ್ರಾಲಯವು ನಗರದಲ್ಲಿ ಭಾನುವಾರ ‘ಮಯೋಪಿಯಾ ಓಟ’ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಯೋಪಿಯಾ (ಸಮೀಪ ದೃಷ್ಟಿ) ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಿತು.
ಕಬ್ಬನ್ ರಸ್ತೆಯಲ್ಲಿ ಇರುವ ರಾಜೇಂದ್ರ ಸಿಂಗ್‌ಜಿ ಸೇನಾ ಅಧಿಕಾರಿಗಳ ಸಂಸ್ಥೆಯಲ್ಲಿ ಬೆಳಿಗ್ಗೆ 7.30ರ ವೇಳೆಗೆ ಓಟಕ್ಕೆ ಚಾಲನೆ ನೀಡಲಾಯಿತು. ಮೇಜರ್ ಜನರಲ್ ವಿನೋದ್ ಟಾಮ್ ಮ್ಯಾಥ್ಯೂ, ಐಪಿಎಸ್ ಅಧಿಕಾರಿ ರಮಣ್ ಗುಪ್ತ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಓಟಕ್ಕೆ ಚಾಲನೆ ನೀಡಿದರು. ಮಹಿಳೆಯರು, ಮಕ್ಕಳು ಸೇರಿ 800 ಮಂದಿ ಓಟದಲ್ಲಿ ಭಾಗವಹಿಸಿದ್ದರು.
ಸಮೀಪದ ದೃಷ್ಟಿ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಮ್ಯಾಜಿಕ್ ಶೋ, ಫೇಸ್ ಪೇಂಟಿಂಗ್ ಸೇರಿ ವಿವಿಧ ವಿನೋದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗಾಗಿ ವಿವಿಧ ಆಟಗಳನ್ನು ಆಡಿಸುವುದರ ಜೊತೆಗೆ ಜಾನಪದ ಕಲಾ ಪ್ರದರ್ಶನ, ಆರೋಗ್ಯಕರ ತಿನಿಸುಗಳ ವ್ಯವಸ್ಥೆ ಸೇರಿ ಹಲವು ವೈಶಿಷ್ಟ್ಯತೆಯನ್ನು ಕಾರ್ಯಕ್ರಮ ಒಳಗೊಂಡಿತ್ತು. ನಾರಾಯಣ ನೇತ್ರಾಲಯದ ವೈದ್ಯರು ಹಾಗೂ ಸಿಬ್ಬಂದಿ ಮಯೋಪಿಯಾದ ಗಂಭೀರತೆ ಬಗ್ಗೆ ತಿಳಿಸಿ, ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಿದರು.
ಮಯೋಪಿಯಾ ಸಮಸ್ಯೆ ಬಗ್ಗೆ ಮಾತನಾಡಿದ ನಾರಾಯಣ ನೇತ್ರಾಲಯದ ಡಾ. ಸುಮಿತಾ, ‘ಮಯೋಪಿಯಾ ಸಮಸ್ಯೆಯು ಆನುವಂಶಿಕ ಹಾಗೂ ಚಟುವಟಿಕೆ ರಹಿತ ಜೀವನಶೈಲಿಯಿಂದ ಬರುವಂತಹ ಅಪಾಯಕಾರಿ ದೃಷ್ಟಿ ಸಮಸ್ಯೆಯಾಗಿದೆ. ವಯಸ್ಸು ಹೆಚ್ಚಾದಂತೆ ಸಮಸ್ಯೆ ಉಲ್ಬಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿದೆ. ಡಿಜಿಟಲ್ ಉಪಕರಣಗಳ ಅತಿಯಾದ ಬಳಕೆಯೇ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಈ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ಕೊಡಿಸದಿದ್ದರೆ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ಹೇಳಿದರು.
ನಾರಾಯಣ ನೇತ್ರಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಮಿತ್ತಲ್, ‘ಸಮೀಪ ದೃಷ್ಟಿದೋಷ ಪ್ರಕರಣಗಳು ವೇಗವಾಗಿ ಹೆಚ್ಚಳವಾಗುತ್ತಿವೆ. ಈ ಸಮಸ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.