ಬೆಂಗಳೂರು: ಮಾರತ್‌ಹಳ್ಳಿ ಹಾಗೂ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಒಡಿಶಾದ ಇಬ್ಬರು ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ನೈಜಿರಿಯಾ ಮೂಲದ ಅಡಿಸೌಜಿ (30), ಒಡಿಶಾ ಮೂಲದ ರಾಕೇಶ್ ಕುಮಾರ್(26), ಲಕ್ಷ್ಮೀಧರ್ (23) ಬಂಧಿತರು.
ಬಂಧಿತ ಆರೋಪಿಗಳಿಂದ ₹50 ಲಕ್ಷ ಮೌಲ್ಯದ 180 ಗ್ರಾಂ ಎಂಡಿಎಂಸಿ ಕ್ರಿಸ್ಟಲ್, ಮಾದಕ ದ್ರವ್ಯ ತುಂಬಿದ 150 ಮಾತ್ರೆಗಳು, 15 ಕೆಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ.
ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳಾದ ರಾಕೇಶ್ ಕುಮಾರ್ ಮತ್ತು ಲಕ್ಷ್ಮೀಧರ್ ಸುಮಾರು 6 ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಪಾದಚಾರಿ ಮಾರ್ಗದಲ್ಲಿ ತಳ್ಳುವ ಗಾಡಿಯಲ್ಲಿ ತಿಂಡಿ-ತಿನಿಸುಗಳ ವ್ಯಾಪಾರ ಮಾಡಿಕೊಂಡಿದ್ದರು. ಬಳಿಕ ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಸ್ಥಳೀಯ ಪರಿಚಯಸ್ಥ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದರು. ಇವರಿಂದ 15 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು
ನೈಜಿರಿಯಾ ಮೂಲದ ಅಡಿಸೌಜಿ 2005ರಲ್ಲಿ ವ್ಯವಹಾರಿಕ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ತನ್ನ ಪಾಸ್‌ಪೋರ್ಟ್ ಮತ್ತು ವೀಸಾ ಅವಧಿ ಮುಕ್ತಾಯವಾಗಿದ್ದರೂ ನಗರದಲ್ಲೇ ಅಕ್ರಮವಾಗಿ ನೆಲೆಸಿದ್ದ. ಬಳಿಕ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತನಿಂದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.