ಬೆಂಗಳೂರು: ‘ಅಯೋಧ್ಯೆಯಲ್ಲಿ ಟೆಂಟ್‌ನಲ್ಲಿದ್ದ ರಾಮನನ್ನು ಭವ್ಯ ಬಂಗಲೆಯಲ್ಲಿ ಕೂರಿಸಿ, ಶ್ರಮ ಜೀವಿಗಳನ್ನು ಟೆಂಟ್‌ನಲ್ಲಿ ಇರಿಸಿ ವಿಜೃಂಭಿಸುತ್ತಿದ್ದೇವೆ. ಇದು ಇವತ್ತಿನ ವ್ಯಂಗ್ಯವಾಗಿದ್ದು, ಇದಕ್ಕೆ ವಿಜ್ಞಾನಿಗಳು ಸಹಾಯ ಮಾಡುತ್ತಿರುವುದು ದೊಡ್ಡ ಕ್ರೌರ್ಯ’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.
ನವಕರ್ನಾಟಕ ಪ್ರಕಾಶನ ಮತ್ತು ಮಾ–ಲೆ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿ. ರಾಮಕೃಷ್ಣ ಅವರ ‘ಹಿಂದುತ್ವ–ಮೆಲೋಡಿ ಆ್ಯಂಡ್ ಮೈಲ್‌ಸ್ಟೋನ್’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯ ನಿರ್ಮಾಣವಾಗಿದೆ. ಅಲ್ಲಿ ಅಂಗಡಿಗಳ ನಿರ್ಮಾಣಕ್ಕೆ ಜಮೀನು ಸಾಕಾಗುವುದಿಲ್ಲ ಎಂಬ ಕಾರಣಕ್ಕೆ ಅಕ್ಕಪಕ್ಕದ ರೈತರ ಮೇಲೆ ದಬ್ಬಾಳಿಕೆ ಮಾಡಿ, ಜಮೀನುಗಳನ್ನು ಬಿಡಿಸಿಕೊಳ್ಳಲಾಗುತ್ತಿದೆಯಂತೆ. ಅವರಿಗೆ ಬದುಕಲು ಸ್ಥಳವಿಲ್ಲವೆಂದು ಟೆಂಟ್‌ಗಳನ್ನು ಹಾಕುತ್ತಿದ್ದಾರಂತೆ. ಇದು ನಮ್ಮ ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಮನವಮಿ ದಿನದಂದು ಅಲ್ಲಿನ ಶ್ರೀರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಬೆಳಕು ಬರುವಂತೆ ಎಲೆಕ್ಟ್ರಾನಿಕ್ ಉಪಕರಣವನ್ನು ಅಳವಡಿಸುತ್ತಿದ್ದಾರೆ. ಇಲ್ಲಿನ ಗವಿಗಂಗಾಧರೇಶ್ವರ ದೇವಸ್ಥಾನದ ರೀತಿಯಲ್ಲಿ ಸಹಜವಾಗಿ ಅಲ್ಲಿ ಸೂರ್ಯನ ಬೆಳಕು ವಿಗ್ರಹದ ಮೇಲೆ ಬೀಳುವುದಿಲ್ಲ. ಹೇಗಾದರೂ ಮಾಡಿ ಬೆಳಕು ತರಿಸಬೇಕೆಂದು ಕ್ರಮವಹಿಸಿದ್ದಾರೆ. ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳ ಬುದ್ಧಿಶಕ್ತಿ ಆ ಕಡೆ ವಾಲುತ್ತಿರುವುದು ನಮ್ಮ ದುರಂತ. ವರ್ಷವಿಡೀ ರಾಮನ ವಿಗ್ರವನ್ನು ಕತ್ತಲೆಯಲ್ಲಿ ಇರಿಸಿ, ಒಂದು ದಿನ ಕೃತಕ ಬೆಳಕನ್ನು ವಿಗ್ರಹದ ಮೇಲೆ ಹರಿಸಲಾಗುತ್ತದೆ. ನಾವು ದಿನವಿಡೀ ಹೊರಗಡೆ ಓಡಾಡುತ್ತೇವೆ. ನಮಗೆ ಸೂರ್ಯನ ಬೆಳಕು ಸಹಜವಾಗಿ ದೊರೆಯುವುದರಿಂದ ವಿಟಮಿನ್ ಡಿ ಸಿಗುತ್ತದೆ’ ಎಂದು ವ್ಯಂಗ್ಯವಾಡಿದರು.
‘ಕಳೆದ 10–12 ವರ್ಷಗಳಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷರು ಉಪಗ್ರಹದ ಪ್ರತಿಕೃತಿ ಹಾಗೂ ವಿಜ್ಞಾನಿಗಳ ಪಟಾಲಂ ಹಿಡಿದುಕೊಂಡು, ತಿರುಪತಿ, ಕೊಲ್ಲೂರು ಸೇರಿ ವಿವಿಧ ದೇವಾಲಯಗಳಿಗೆ ತೆರಳುತ್ತಿದ್ದಾರೆ. ಒಬ್ಬ ಮಹಾಶಯ ಹರಕೆ ಹೊತ್ತು, ತುಲಾಭಾರವನ್ನೂ ಮಾಡಿಕೊಂಡಿದ್ದಾನೆ. ಸಂವಿಧಾನದ ವಿರುದ್ಧವಾಗಿ, ಬಹಿರಂಗವಾಗಿ ದೇವರಿಗೆ ಹರಕೆ ತೀರಿಸುವುದು ವೈರುಧ್ಯ. ವೈಜ್ಞಾನಿಕತೆಯ ನಡುವೆ ಮೂಢನಂಬಿಕೆ ಪ್ರದರ್ಶನ ನಮ್ಮ ದೇಶದಲ್ಲಿ ಮಾತ್ರ ಕಾಣಿಸುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತಿ ಹಾಗೂ ಕೃತಿಯ ಲೇಖಕ ಜಿ. ರಾಮಕೃಷ್ಣ, ‘ವಿಜ್ಞಾನದ ಬಗ್ಗೆ ಕಾಳಜಿ ಕಡಿಮೆಯಾಗುತ್ತಿದೆ. ವೈಜ್ಞಾನಿಕ ವಿಚಾರಧಾರೆಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಬೇಕು’ ಎಂದರು.
‘ದೇವಿಪ್ರಸಾದ್ ಚಟ್ಟೋಪಾಧ್ಯಾಯ ಸ್ಮಾರಕ ಉಪನ್ಯಾಸ’ದಡಿ ‘ವಿಜ್ಞಾನದ ಸಂಸ್ಕೃತಿ–ವಿಕೃತಿ’ ಎಂಬ ವಿಷಯದ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಎಂ.ಆರ್.ಎನ್. ಮೂರ್ತಿ ಮಾತನಾಡಿದರು.
- ಪುಸ್ತಕ ಪರಿಚಯ
ಪುಸ್ತಕ: ‘ಹಿಂದುತ್ವ–ಮೆಲೋಡಿ ಆ್ಯಂಡ್ ಮೈಲ್‌ಸ್ಟೋನ್’
ಲೇಖಕ: ಜಿ. ರಾಮಕೃಷ್ಣ
ಪುಟಗಳು: 128
ಬೆಲೆ: ₹ 175
ಪ್ರಕಾಶನ: ನವಕರ್ನಾಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.